ADVERTISEMENT

ಮಥುರಾ: ವಕ್ಫ್‌ ಕಾಯ್ದೆ ನಿಯಮ ಅನ್ವಯವಾಗದು –ಹಿಂದೂ ಪರ ವಾದ

ಪಿಟಿಐ
Published 30 ಏಪ್ರಿಲ್ 2024, 15:47 IST
Last Updated 30 ಏಪ್ರಿಲ್ 2024, 15:47 IST
ಮಥುರಾದ ಕೃಷ್ಣ ಜನ್ಮಭೂಮಿ ದೇವಸ್ಥಾನದ ನೋಟ –ಎಎಫ್‌ಪಿ ಸಂಗ್ರಹ ಚಿತ್ರ
ಮಥುರಾದ ಕೃಷ್ಣ ಜನ್ಮಭೂಮಿ ದೇವಸ್ಥಾನದ ನೋಟ –ಎಎಫ್‌ಪಿ ಸಂಗ್ರಹ ಚಿತ್ರ    

ಪ್ರಯಾಗ್‌ರಾಜ್‌: ಮಥುರಾದ ಕೃಷ್ಣ ಜನ್ಮಭೂಮಿ –ಶಾಹಿ ಈದ್ಗಾ ವಿವಾದ ಕುರಿತ ‍ಪ್ರಕರಣದಲ್ಲಿ ವಿವಾದಿತ ಆಸ್ತಿ ವಕ್ಫ್‌ ಮಂಡಳಿಗೆ ಸೇರಿದ್ದಲ್ಲ. ಈ ಆಸ್ತಿಗೆ ವಕ್ಫ್‌ ಕಾಯ್ದೆ ನಿಯಮಗಳು ಅನ್ವಯವಾಗುವುದಿಲ್ಲ ಎಂದು ಹಿಂದೂ ಪರ ವಕೀಲರು ವಾದ ಮಂಡಿಸಿದ್ದಾರೆ.

ಅಲಹಾಬಾದ್ ಹೈಕೋರ್ಟ್ ಎದುರು ಮುಸ್ಲಿಂ ಪರ ವಕೀಲರ ವಾದಕ್ಕೆ ಹೀಗೆ ಪ್ರತಿವಾದ ಮಂಡಿಸಲಾಗಿದೆ. ಪ್ರಕರಣದ ಸಿಂಧುತ್ವ ಪ್ರಶ್ನಿಸಿ ಮುಸ್ಲಿಂರ ಪರವಾಗಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರು ನಡೆಸುತ್ತಿದ್ದಾರೆ.

ಪ್ರತಿವಾದವನ್ನು ಮಂಡಿಸಿದ ಹಿಂದೂ ಪರ ವಕೀಲ ರಾಹುಲ್‌ ಸಹಾಯ್ ಅವರು, ಪ್ರಾರ್ಥನಾ ಸ್ಥಳಗಳ (ವಿಶೇಷ ನಿಯಮಗಳ) ಕಾಯ್ದೆ 1991ರ ನಿಯಮಗಳು ಇದಕ್ಕೆ ಅನ್ವಯವಾಗುವುದಿಲ್ಲ ಎಂದು ಪ್ರತಿಪಾದಿಸಿದರು.

ADVERTISEMENT

ಪ್ರಾರ್ಥನಾ ಸ್ಥಳಗಳ ಕಾಯ್ದೆಯಲ್ಲಿ ಸ್ಥಳ ಅಥವಾ ನಿರ್ಮಾಣದ ಧಾರ್ಮಿಕ ಸ್ವರೂಪ ಕುರಿತಂತೆ ವ್ಯಾಖ್ಯಾನವಿಲ್ಲ. ಸ್ಥಳದ ಧಾರ್ಮಿಕ ಸ್ವರೂಪವನ್ನು ಸಾಕ್ಷ್ಯಗಳನ್ನು ಆಧರಿಸಿ ಸಿವಿಲ್‌ ಕೋರ್ಟ್ ನಿರ್ಧರಿಸಬೇಕಾಗಿದೆ ಎಂದರು.

ಈ ವಾದಕ್ಕೆ ಪೂರಕವಾಗಿ ಗ್ಯಾನವಾಪಿ ಪ್ರಕರಣದಲ್ಲಿ ಕೋರ್ಟ್‌ ನೀಡಿರುವ ಆದೇಶವನ್ನು ಉಲ್ಲೇಖಿಸಿದರು. 

ಈಗ ಪ್ರಶ್ನಿಸಲಾದ ಆಸ್ತಿ ದೇಗುಲವಾಗಿತ್ತು. ಬಲವಂತವಾಗಿ ಸುಪರ್ದಿಗೆ ಪಡೆದು ಮುಸ್ಲಿಂರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇಂತಹ ನಡೆಯಿಂದ ಸ್ಥಳದ ಸ್ವರೂಪ ಬದಲಿಸಲಾಗದು. ಈ ಕಾರಣದಿಂದಲೂ ವಕ್ಫ್‌ ಕಾಯ್ದೆ ನಿಯಮಗಳು ಇಲ್ಲಿ ಅನ್ವಯವಾಗುವುದಿಲ್ಲ ಎಂದು ಹೇಳಿದರು.

ವಿಚಾರಣೆ ಬುಧವಾರ ಮುಂದುವರಿಯಲಿದೆ. ಹಿಂದೂ ಪರ ವಕೀಲರ ಬಳಿಕ ಮುಸಲ್ಮಾನರ ಪರ ವಕೀಲರು ವಾದ ಮಂಡಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.