ಕಿಶನ್‌ಗಂಜ್: ಮುಸ್ಲಿಮರ ಮಸೀದಿ, ಪವಿತ್ರ ಸ್ಥಳಗಳನ್ನು ಕಿತ್ತುಕೊಳ್ಳಲಿಕ್ಕಾಗಿಯೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್ (ತಿದ್ದುಪಡಿ) ಕಾಯ್ದೆ ಜಾರಿಗೊಳಿಸಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸದುದ್ಧೀನ್ ಓವೈಸಿ ಅವರು ಬುಧವಾರ ಕಿಡಿಕಾರಿದರು.
ಬಿಹಾರದ ಕಿಶನ್‌ಗಂಜ್ ಜಿಲ್ಲೆಯ ಕೋಚಾಧಾಮನ್ ವಿಧಾನಸಭಾ ಕ್ಷೇತ್ರದಲ್ಲಿ ಸೀಮಾಂಚಲ ನ್ಯಾಯಯಾತ್ರೆಗೆ ಚಾಲನೆ ನೀಡಿದ ಅವರು, ‘ಸದುದ್ದೇಶದಿಂದ ವಕ್ಫ್ ಕಾಯ್ದೆ ಜಾರಿಗೊಳಿಸಿಲ್ಲ. ಮುಸ್ಲಿಮರ ಮಸೀದಿ, ಈದ್ಗಾ ಮೈದಾನ, ಖಬರ್‌ಸ್ತಾನಗಳು ಯಾರೊಬ್ಬರ ಸ್ವತ್ತಲ್ಲ. ಅವೆಲ್ಲವೂ ಅಲ್ಲಾಹುವಿಗೆ ಸೇರಿದವು’ ಎಂದರು.
‘ಮೋದಿ ಅವರ ಅಪವಿತ್ರ ಉದ್ದೇಶವು ದೇವರ ಇಚ್ಚೆಯಿಂದ ಎಂದಿಗೂ ಈಡೇರಲ್ಲ. ಮುಸ್ಲಿಮರು ತಮ್ಮ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಜಗತ್ತು ಅಸ್ತಿತ್ವದಲ್ಲಿರುವವರೆಗೂ ಮುಂದುವರಿಸುತ್ತಾರೆ. ಅಲ್ಲಾಹುವನ್ನು ನಂಬಿದವರು ಪವಿತ್ರವೆಂದು ಭಾವಿಸುವ ಸ್ಥಳಗಳು ಎಂದೆಂದಿಗೂ ಬಿಜೆಪಿ– ಆರ್‌ಎಸ್‌ಎಸ್ ವಶವಾಗಲ್ಲ’ ಎಂದು ಅವರು ಹೇಳಿದರು.
‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಮುಸ್ಲಿಮರು ಜಾತ್ಯತೀತ ಎಂದು ಹೇಳಿಕೊಂಡ ಪಕ್ಷಗಳನ್ನೆಲ್ಲಾ ಬೆಂಬಲಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲಿಕ್ಕಾಗಿ ಮತ ಹಾಕಿದ್ದಾರೆ. ಆದರೆ ಈ ಹೊರೆಯನ್ನು ಕೂಲಿಗಳಂತೆ ಇನ್ನಷ್ಟು ದಿನ ನಮ್ಮ ಹೆಗಲುಗಳ ಮೇಲೆ ಹೊರಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳುವ ಸಮಯ ಬಂದಿದೆ’ ಎಂದರು.
‘ನಮ್ಮ ಯೋಗಕ್ಷೇಮಕ್ಕೆ ಅಗತ್ಯವಾದದ್ದನ್ನು ನಾವು ಮಾಡಬೇಕಿದೆ. ಕೆಲವು ಪಕ್ಷಗಳು ಅಧಿಕಾರ ಅನುಭವಿಸಲು ಸಹಾಯ ಮಾಡಲು ಇನ್ಮುಂದೆ ನಮ್ಮ ಆಕಾಂಕ್ಷೆಗಳನ್ನು ತ್ಯಾಗ ಮಾಡುವುದಿಲ್ಲ’ ಎಂದು ಆರ್‌ಜೆಡಿ, ಕಾಂಗ್ರೆಸ್, ಎಡಪಕ್ಷಗಳ ಹೆಸರನ್ನು ಪ್ರಸ್ತಾಪಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.