
ಮಸೂದೆಯ ಕುರಿತು ಸಚಿವ ಕಿರಣ್ ರಿಜಿಜು ಮತ್ತು ಸಂಸದ ಕೆ.ಸಿ. ವೇಣುಗೋಪಾಲ್ ಮಾತನಾಡಿದರು –ಪಿಟಿಐ ಚಿತ್ರ
ನವದೆಹಲಿ: ‘ವಕ್ಫ್ (ತಿದ್ದುಪಡಿ) ಮಸೂದೆ’ಯನ್ನು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಗುರುವಾರ ಮಂಡಿಸಿದೆ. ಮಸೂದೆಯು ಮಸೀದಿಗಳ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಹೊಂದಿಲ್ಲ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.
ಆದರೆ, ಈ ಮಸೂದೆಯು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ, ಇದು ಸಂವಿಧಾನದ ಮೇಲಿನ ದಾಳಿ ಎಂದು ವಿರೋಧ ಪಕ್ಷಗಳು ಕಟುವಾಗಿ ಆರೋಪಿಸಿವೆ. ಮಸೂದೆಯ ಕುರಿತು ಲೋಕಸಭೆಯಲ್ಲಿ ಬಿರುಸಿನ ಚರ್ಚೆಗಳು ನಡೆದ ನಂತರ, ಅದನ್ನು ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಪರಿಶೀಲನೆಗೆ ಒಪ್ಪಿಸಲಾಗಿದೆ.
ಜೆಪಿಸಿ ರಚಿಸಲು ತಾವು ಎಲ್ಲ ಪಕ್ಷಗಳ ಮುಖಂಡರ ಜೊತೆ ಮಾತುಕತೆ ನಡೆಸುವುದಾಗಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಪ್ರಕಟಿಸಿದ್ದಾರೆ.
ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಸೂದೆಯ ಮಂಡನೆಗೆ ಅವಕಾಶ ಕೋರಿದ ತಕ್ಷಣ, ‘ಇಂಡಿಯಾ’ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಮಸೂದೆ ಮಂಡನೆಯನ್ನು ವಿರೋಧಿಸಲು ನೋಟಿಸ್ ನೀಡಿದ್ದ ಕಾಂಗ್ರೆಸ್ಸಿನ ಕೆ.ಸಿ. ವೇಣುಗೋಪಾಲ್ ಅವರು ‘ಮುಂಬರುವ ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟು ಮಸೂದೆಯನ್ನು ಮಂಡಿಸಲಾಗುತ್ತಿದೆ’ ಎಂದು ದೂರಿದರು.
ಬಿಜೆಪಿಯ ವಿಭಜನಕಾರಿ ರಾಜಕಾರಣಕ್ಕೆ ಲೋಕಸಭಾ ಚುನಾವಣೆಯಲ್ಲಿ ಜನ ಪಾಠ ಕಲಿಸಿದ್ದಾರೆ. ಆದರೂ ಆ ಪಕ್ಷವು ಅದನ್ನೇ ಮುಂದುವರಿಸಿದೆ ಎಂದರು. ‘ಇದು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ನೇರ ಆಕ್ರಮಣ... ಮುಂದೆ ನೀವು ಕ್ರೈಸ್ತರ ವಿರುದ್ಧ, ನಂತರ ಜೈನರ ವಿರುದ್ಧ ಹೋಗುತ್ತೀರಿ’ ಎಂದರು.
ನ್ಯಾಯಮಂಡಳಿ ನೀಡಿದ ಆದೇಶಕ್ಕೆ ಮೇಲ್ಮನವಿ ಸಲ್ಲಿಸಲು ಹಿಂದಿನ ಕಾನೂನಿನಲ್ಲಿ ಅವಕಾಶ ಇಲ್ಲ. ಈಗ ಆದೇಶಗಳನ್ನು ಪ್ರಶ್ನಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ರಿಜಿಜು ವಿವರಿಸಿದರು.
‘ಯಾವ ಕಾನೂನು ಕೂಡ ಸಂವಿಧಾನಕ್ಕೂ ಮಿಗಿಲಾಗಲು ಅವಕಾಶವಿಲ್ಲ. ಆದರೆ 1995ರ ವಕ್ಫ್ ಕಾಯ್ದೆಯಲ್ಲಿ, ಸಂವಿಧಾನದ ಚೌಕಟ್ಟನ್ನೂ ಮೀರಿದ ಅಂಶಗಳಿವೆ. ಇಂಥವು ಬದಲಾಗಬೇಡವೇ’ ಎಂದರು.
ಬಿಜೆಪಿಯ ಕಟ್ಟಾ ಬೆಂಬಲಿಗರನ್ನು ಓಲೈಸಲು ಈ ಮಸೂದೆ ತರಲಾಗಿದೆ. ವಕ್ಫ್ ಮಂಡಳಿಗೆ ಮುಸ್ಲಿಮೇತರರನ್ನು ನೇಮಕ ಮಾಡುವುದು ಏಕೆ? ಬೇರೆ ಧರ್ಮಗಳ ಮಂಡಳಿಗಳಲ್ಲಿ ಹೀಗೇ ಮಾಡಲಾಗುತ್ತದೆಯೇ?ಅಖಿಲೇಶ್ ಯಾದವ್, ಎಸ್‌ಪಿ ನಾಯಕ
ಮಸೂದೆಯ ಉದ್ದೇಶ, ಅದನ್ನು ಮಂಡಿಸುತ್ತಿರುವ ಸಂದರ್ಭದ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ನಾವು ಇದನ್ನು ವಿರೋಧಿಸುತ್ತೇವೆ. ಮಸೂದೆಯನ್ನು ಹಿಂಪಡೆಯಿರಿಸುಪ್ರಿಯಾ ಸುಳೆ, ಎನ್‌ಸಿಪಿ (ಪವಾರ್ ಬಣ)
ನೀವು ಮುಸ್ಲಿಮರ ವಿರೋಧಿಗಳು. ಈ ಮಾತಿಗೆ ಈ ಮಸೂದೆ ಸಾಕ್ಷಿಅಸಾದುದ್ದೀನ್ ಒವೈಸಿ, ಎಐಎಂಐಎಂ ನಾಯಕ
ಕೆಲವರು ವಕ್ಫ್ ಮಂಡಳಿಗಳನ್ನು ಕೈವಶ ಮಾಡಿಕೊಂಡಿದ್ದಾರೆ. ಸಾಮಾನ್ಯ ಮುಸ್ಲಿಮರಿಗೆ ನ್ಯಾಯ ಕೊಡಿಸಲು ಈ ಮಸೂದೆ ತರಲಾಗುತ್ತಿದೆಕಿರಣ್ ರಿಜಿಜು,ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.