ಲೋಕಸಭೆ
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನವನ್ನು ದುರ್ಬಲಗೊಳಿಸುವ ಉದ್ದೇಶದಿಂದಲೇ ವಕ್ಫ್ ಕಾನೂನಿಗೆ ತಿದ್ದುಪಡಿ ತಂದಿದೆ ಎಂದು ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಬುಧವಾರ ಒಕ್ಕೊರಲಿನಿಂದ ಆಕ್ರೋಶ ವ್ಯಕ್ತಪಡಿಸಿದವು.
ಕಾನೂನಿಗೆ ತಿದ್ದುಪಡಿ ತಂದಿರುವುದರ ಹಿಂದೆ ದೇಶದ ಅಲ್ಪಸಂಖ್ಯಾತ ಸಮುದಾಯದವರ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ದೇಶವೂ ಇದೆ ಎಂದು ಅವು ದೂರಿದವು.
ಆಡಳಿತಾರೂಢ ಬಿಜೆಪಿಯು ತನ್ನ ವೈಫಲ್ಯಗಳನ್ನು ಮರೆಮಾಚಲು ಯತ್ನಿಸುತ್ತಿದೆ. ಲೋಕಸಭೆಯಲ್ಲಿ ಬುಧವಾರ ಮಂಡನೆಯಾದ ವಕ್ಫ್ ತಿದ್ದುಪಡಿ ಮಸೂದೆಯು ಬಿಜೆಪಿಯ ಪಾಲಿಗೆ ನಿರ್ಣಾಯಕ ಸೋಲು ತಂದಿರಿಸಲಿದೆ ಎಂದು ಎಚ್ಚರಿಸಿದವು.
ತಿದ್ದುಪಡಿ ಮಸೂದೆಯಲ್ಲಿ ಇರುವ, ‘ಕನಿಷ್ಠ ಐದು ವರ್ಷಗಳಿಂದ ಇಸ್ಲಾಂ ಧರ್ಮವನ್ನು ಪಾಲಿಸುತ್ತಿರುವವರು ಮಾತ್ರ ವಕ್ಫ್‌ಗೆ ಆಸ್ತಿ ದಾನ ಮಾಡಬಹುದು, ವಕ್ಫ್ ಮಂಡಳಿಗೆ ಕೊಡುಗೆಯಲ್ಲಿ ಇಳಿಕೆ’ಯಂತಹ ಅಂಶಗಳನ್ನು ವಿರೋಧ ಪಕ್ಷಗಳ ಸದಸ್ಯರು ಪ್ರಶ್ನಿಸಿದರು.
ವಕ್ಫ್ (ತಿದ್ದುಪಡಿ) ಮಸೂದೆ – 2025ರ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ಸಿನ ಕೆ.ಸಿ. ವೇಣುಗೋಪಾಲ್ ಅವರು, ‘ಬಿಜೆಪಿಯು ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಬಯಕೆ ಹೊಂದಿದೆ. ಅಲ್ಪಸಂಖ್ಯಾತರನ್ನು ನಾಶಮಾಡುವ ಸಂಘಪರಿವಾರದ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುವುದು ಬಿಜೆಪಿಯ ಉದ್ದೇಶ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ ಆಡಳಿತದ ಅವಧಿಯಲ್ಲಿ ಹಲವು ಕಾನೂನುಗಳು ಜಾರಿಗೆ ಬಂದಿವೆ. ಆದರೆ ಬಿಜೆಪಿಯು, ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿಯನ್ನು ನೀಡುವ, ನಿರುದ್ಯೋಗಿ ಯುವಕರ ಸಮಸ್ಯೆಗಳನ್ನು ಪರಿಹರಿಸುವ ಕಾನೂನನ್ನು ಜಾರಿಗೆ ತಂದಿಲ್ಲ ಎಂದು ವೇಣುಗೋಪಾಲ್ ಹೇಳಿದರು. ‘ಯಾವ ಮಸೂದೆಗೆ ಆದ್ಯತೆ ದೊರೆತಿದೆ ಎಂಬುದನ್ನು ಗಮನಿಸಬಹುದು. ಅವರಿಗೆ ಇರುವುದು ಒಂದೇ ಕಾರ್ಯಸೂಚಿ. ಅದು ಧರ್ಮದ ಹೆಸರಿನಲ್ಲಿ ಭಾರತ ಮಾತೆಯನ್ನು ವಿಭಜಿಸುವುದು’ ಎಂದು ದೂರಿದರು.
ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರ ನೇಮಕಕ್ಕೆ ಅವಕಾಶ ಕಲ್ಪಿಸಿರುವುದು ತಾರತಮ್ಯದ ಸ್ಪಷ್ಟ ನಿದರ್ಶನ ಎಂದು ಹೇಳಿದರು.
ಈ ಮಸೂದೆಯು ದೇಶದ ಸಂವಿಧಾನದ ಮೂಲ ಸ್ವರೂಪದ ಮೇಲಿನ ಹಲ್ಲೆಯಂತೆ ಇದೆ. ಇದು ದೇಶದ ಒಕ್ಕೂಟ ವ್ಯವಸ್ಥೆಯ ಮೇಲಿನ ಆಕ್ರಮಣವೂ ಹೌದು. ಸಂವಿಧಾನವನ್ನು ದುರ್ಬಲಗೊಳಿಸುವ, ಅಲ್ಪಸಂಖ್ಯಾತ ಸಮುದಾಯವನ್ನು ಅವಹೇಳನ ಮಾಡುವ, ಸಮಾಜವನ್ನು ಒಡೆಯುವ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಿತ್ತುಕೊಳ್ಳುವ ನಾಲ್ಕು ಪ್ರಮುಖ ಉದ್ದೇಶಗಳನ್ನು ಇದು ಹೊಂದಿದೆ ಎಂದು ಕಾಂಗ್ರೆಸ್ಸಿನ ಉಪ ನಾಯಕ ಗೌರವ್ ಗೊಗೊಯಿ ಹೇಳಿದರು.
ವ್ಯಕ್ತಿಯೊಬ್ಬ ವಕ್ಫ್‌ಗೆ ದಾನ ಮಾಡಬೇಕು ಎಂದಾದರೆ ಆತ ಕನಿಷ್ಠ ಐದು ವರ್ಷಗಳಿಂದ ಇಸ್ಲಾಂ ಧರ್ಮವನ್ನು ಪಾಲಿಸುತ್ತಿರಬೇಕು ಎಂದು ಮಸೂದೆಯಲ್ಲಿ ಹೇಳಿರುವ ಅಂಶವನ್ನು ಉಲ್ಲೇಖಿಸಿದ ಗೊಗೊಯಿ, ‘ಅಲ್ಪಸಂಖ್ಯಾತರು ಇಂದು ಪ್ರಮಾಣಪತ್ರ ಹಿಡಿದು ತಮ್ಮ ಧಾರ್ಮಿಕ ಅಸ್ಮಿತೆಯನ್ನು ಸಾಬೀತು ಮಾಡಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಾರೆ. ನಾಳೆ ಇತರ ಧಾರ್ಮಿಕ ನಂಬಿಕೆಗಳ ಜನರೂ ಇದೇ ರೀತಿ ಮಾಡಬೇಕಾಗುತ್ತದೆಯೇ’ ಎಂದು ಪ್ರಶ್ನಿಸಿದರು.
ಮಹಾಕುಂಭಮೇಳದ ಸಂದರ್ಭದಲ್ಲಿ ಮೃತಪಟ್ಟ ಅಥವಾ ಕಣ್ಮರೆಯಾದ ಹಿಂದೂಗಳನ್ನು ಗುರುತಿಸುವ ವಿಚಾರವನ್ನು ಮರೆಮಾಚುವ ಉದ್ದೇಶದಿಂದ ಬಿಜೆಪಿಯು, ಮುಸ್ಲಿಮರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದರು.
ಇಂದು ನೀವು ಮುಸ್ಲಿಮರ ವಿರುದ್ಧವಾಗಿದ್ದೀರಿ. ನಾಳೆ ನೀವು ಕ್ರೈಸ್ತರ ವಿರುದ್ಧ ಇರುತ್ತೀರಿ. ನಾಡಿದ್ದು ಸಿಖ್ಖರ ವಿರುದ್ಧ ಇರುವಿರಿ. ದೇಶಕ್ಕೆ ಶಾಂತಿ, ಸೌಹಾರ್ದ ಬೇಕಾಗಿದೆಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ಸಂಸದ
ಯಾವ ಸಮುದಾಯವನ್ನು ತಪ್ಪುದಾರಿಗೆ ಎಳೆಯಲು ನೀವು ಬಯಸುತ್ತೀರಿ? ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾ ಡಿದ ಸಮುದಾಯವನ್ನೇ? ಮಂಗಲಪಾಂಡೆ ಜೊತೆ ಪ್ರಾಣತ್ಯಾಗ ಮಾಡಿದ ಸಮುದಾಯವನ್ನೇ?ಗೌರವ್ ಗೊಗೊಯಿ, ಕಾಂಗ್ರೆಸ್ ಸಂಸದ
ವಕ್ಫ್ ಮಸೂದೆಯು ಮುಸ್ಲಿಮರ ಧಾರ್ಮಿಕ ವಿಷಯಗಳಲ್ಲಿ ಮತ್ತು ಅವರು ದಾನವಾಗಿ ನೀಡಿರುವ ಆಸ್ತಿಗಳ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸುತ್ತದೆ ಎಂಬ ಭೀತಿಯನ್ನು ಮತಬ್ಯಾಂಕ್ ಮೇಲೆ ಕಣ್ಣಿಟ್ಟು ಹರಡಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಹೇಳಿದರು.
ವಕ್ಫ್ ಮಸೂದೆ ಕುರಿತ ಚರ್ಚೆಯ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ವಕ್ಫ್ ಪರಿಷತ್ತು ಮತ್ತು ಮಂಡಳಿಗಳಲ್ಲಿ ಮುಸ್ಲಿಮೇತರರು ಇರುವುದು ಆಸ್ತಿಗಳ ಆಡಳಿತವು ನಿಗದಿತ ಉದ್ದೇಶಕ್ಕೆ ಅನುಗುಣವಾಗಿ ನಡೆಯುವುದನ್ನು ಖಾತರಿಪಡಿಸುವುದಕ್ಕೆ ಮಾತ್ರ ಎಂದು ಸ್ಪಷ್ಟಪಡಿಸಿದರು.
ಅಲ್ಪಸಂಖ್ಯಾತರನ್ನು ಬೆದರಿಸುವ ಮೂಲಕ ಮತಬ್ಯಾಂಕ್ ಸೃಷ್ಟಿಸಲಾಗುತ್ತಿದೆ, ಅಲ್ಪಸಂಖ್ಯಾತರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿ ದೇಶದಲ್ಲಿ ಗೊಂದಲ ಹರಡಲಾಗುತ್ತಿದೆ ಎಂದು ಕೂಡ ಅವರು ಹೇಳಿದರು.
2014ರ ಲೋಕಸಭಾ ಚುನಾವಣೆಗೂ ಮೊದಲು, ಅಂದರೆ 2013ರಲ್ಲಿ ತುಷ್ಟೀಕರಣದ ಉದ್ದೇಶದಿಂದ ವಕ್ಫ್ ಕಾನೂನನ್ನು ‘ಅತಿ’ಯಾಗಿಸುವ ಕೆಲಸ ಮಾಡಲಾಗಿತ್ತು. ಆಗ ಕಾನೂನಿಗೆ ಬದಲಾವಣೆ ತರುವ ಕೆಲಸ ಮಾಡದೆ ಇದ್ದಿದ್ದರೆ, ಈಗ ಈ ತಿದ್ದುಪಡಿಯನ್ನು ಮಂಡಿಸುವ ಅಗತ್ಯ ಬಹುಶಃ ಇರುತ್ತಿರಲಿಲ್ಲ ಎಂದು ಶಾ ಹೇಳಿದರು.
ಮುಸ್ಲಿಂ ಸಮುದಾಯದ ಸಂಸದರನ್ನೇ ಹೊಂದಿಲ್ಲದ ಪಕ್ಷವು (ಬಿಜೆಪಿ) ಆ ಸಮುದಾಯದ ಹಿತವನ್ನು ಕಾಯುತ್ತೇನೆ ಎಂದು ಹೇಳುತ್ತಿರುವುದು ಒಂದು ವ್ಯಂಗ್ಯಎ. ರಾಜಾ, ಡಿಎಂಕೆ ಸಂಸದ
ವಕ್ಫ್ ತಿದ್ದುಪಡಿ ಮಸೂದೆಯು ತಾರತಮ್ಯ, ಕೋಮುಪ್ರೇರಿತ ಮತ್ತು ಮುಸ್ಲಿಮರ ಸಾಂವಿಧಾನಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇದನ್ನು ತಿರಸ್ಕರಿಸುತ್ತೇವೆಮೊಹಮ್ಮದ್ ಅಲಿ ಮೊಹ್ಸಿನ್, ಎಐಎಂಪಿಎಲ್‌ಬಿ ಉಪಾಧ್ಯಕ್ಷ
ಬುಡಕಟ್ಟು ಸಮುದಾಯಗಳ ಆಸ್ತಿ ಹಾಗೂ ಸಂರಕ್ಷಿತ ಸ್ಮಾರಕಗಳನ್ನು ವಕ್ಫ್ ಆಸ್ತಿ ಎಂದು ಘೋಷಿಸಲು ಅವಕಾಶ ಇಲ್ಲದ ರೀತಿಯಲ್ಲಿ ಮಸೂದೆಗೆ ತಿದ್ದುಪಡಿ ತರಲಾಗಿದೆ.
ಹೊಸ ಕಾನೂನು ಜಾರಿಗೆ ಬಂದ ನಂತರದಲ್ಲಿ, ನಿಗದಿತ ಆರು ತಿಂಗಳಲ್ಲಿ ವಕ್ಫ್ ಆಸ್ತಿಗಳನ್ನು ಅಧಿಕೃತ ಪೋರ್ಟಲ್‌ನಲ್ಲಿ ನೋಂದಾಯಿಸಲು ಹೆಚ್ಚುವರಿಯಾಗಿ ಆರು ತಿಂಗಳನ್ನು ಮಾತ್ರ ವಕ್ಫ್ ನ್ಯಾಯಮಂಡಳಿಯು ನೀಡುತ್ತದೆ ಎಂಬ ತಿದ್ದುಪಡಿಯನ್ನು ಕೂಡ ತರಲಾಗಿದೆ. ಆದರೆ, ಹೀಗೆ ಹೆಚ್ಚುವರಿ ಅವಧಿ ಪಡೆಯುವ ಮೊದಲು ಮುತವಲ್ಲಿಯು, ನಿಗದಿತ ಆರು ತಿಂಗಳಲ್ಲಿ ನೋಂದಣಿ ಮಾಡಿಸಲು ಆಗದೆ ಇದ್ದುದಕ್ಕೆ ಕಾರಣ ತಿಳಿಸಬೇಕು.
ಎಐಎಂಪಿಎಲ್‌ಬಿ ಮತ್ತು ಇತರ ಮುಸ್ಲಿಂ ಸಂಘಟನೆಗಳು ಮಸೂದೆಯ ಬಗ್ಗೆ ತಮ್ಮ ಕಳವಳವನ್ನು ಜೆಪಿಸಿಗೆ ತಿಳಿಸಿದ್ದರೂ ಅದನ್ನು ಪರಿಗಣಿಸಿಲ್ಲಮೌಲಾನಾ ಖಾಲಿದ್ ರಾಶಿ ಫರಂಗಿ, ಎಐಎಂಪಿಎಲ್‌ಬಿ ಕಾರ್ಯನಿರ್ವಾಹಕ ಸದಸ್ಯ
ವಕ್ಫ್ ತಿದ್ದುಪಡಿ ಮಸೂದೆಯು ಮುಸ್ಲಿಂ ಸಮುದಾಯದ ಹಕ್ಕುಗಳಿಗೆ ಧಕ್ಕೆ ತರುವ ‘ಕರಾಳ ಕಾನೂನು’ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಟೀಕಿಸಿದೆ.
‘ಈ ಮಸೂದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಅಲ್ಲದೆ, ಇದರ ವಿರುದ್ಧ ರಾಷ್ಟ್ರದಾದ್ಯಂತ ಬೀದಿಗಿಳಿದು ಹೋರಾಟ ನಡೆಸಲಾಗುವುದು’ ಎಂದು ಮಂಡಳಿ ಬುಧವಾರ ತಿಳಿಸಿದೆ.
ಎಐಎಂಪಿಎಲ್‌ಬಿ ಸದಸ್ಯ ಮೊಹಮ್ಮದ್ ಅದೀಬ್, ‘ಇದು ಮುಸ್ಲಿಂ ಸಮುದಾಯದ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನ' ಎಂದು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
‘ಅವರು ನಮ್ಮ ಆಸ್ತಿಯನ್ನು ಕಸಿದುಕೊಳ್ಳಬಹುದೆಂದು ಭಾವಿಸಿದ್ದಾರೆ. ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ಈ ಮಸೂದೆ ಹಿಂಪಡೆಯುವವರೆಗೂ ನಾವು ವಿರಮಿಸುವುದಿಲ್ಲ. ಮಸೂದೆ ಪರಿಶೀಲನೆಗಾಗಿ ರಚಿಸಲಾದ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಸಭೆಯಲ್ಲೂ ಮಸೂದೆಯನ್ನು ವಿರೋಧಿಸಲಾಗಿದೆ’ ಎಂದು ಅದೀಬ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.