ADVERTISEMENT

ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಕೋಲ್ಕತ್ತ, ಅಹಮದಾಬಾದ್‌ನಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 3:18 IST
Last Updated 5 ಏಪ್ರಿಲ್ 2025, 3:18 IST
   

ಅಹಮದಾಬಾದ್/ಲಖನೌ/ಕೋಲ್ಕತ್ತ: ವಕ್ಫ್ (ತಿದ್ದುಪಡಿ) ಮಸೂದೆ ವಿರೋಧಿಸಿ ಅಹಮದಾಬಾದ್ ಮತ್ತು ಕೋಲ್ಕತ್ತದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದರು.

ಗುಜರಾತ್‌ನ ಅಹಮದಾಬಾದ್‌ನಲ್ಲಿ, ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕರ ನೇತೃತ್ವದಲ್ಲಿ ಸಿದಿ ಸೈಯ್ಯದ್ ಮಸೀದಿಯ ಎದುರು ಪ್ರತಿಭಟನೆ ನಡೆದಿದೆ.

16ನೇ ಶತಮಾನದ ಐತಿಹಾಸಿಕ ಮಸೀದಿಯ ಹೊರಗೆ ಜಮಾಯಿಸಿದ ಪ್ರತಿಭಟನಾಕಾರರು, ವಕ್ಫ್ ಕಾನೂನುಗಳ ತಿದ್ದುಪಡಿ ಹಾಗೂ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅನುಷ್ಠಾನಕ್ಕಾಗಿ ಗುಜರಾತ್ ಸರ್ಕಾರ ನೇಮಿಸಿದ ಸಮಿತಿಯನ್ನು ಟೀಕಿಸುವ ಫಲಕಗಳು ಮತ್ತು ಪೋಸ್ಟರ್‌ಗಳನ್ನು ಹಿಡಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಎರಡು ದಿನಗಳ ಹಿಂದೆಯೇ ಪ್ರತಿಭಟನೆ ನಡೆಸಲು ಯೋಜಿಸಲಾಗಿತ್ತು ಎಂದು ಎಐಎಂಐಎಂ ಸಾಮಾಜಿಕ ಮಾಧ್ಯಮ ಉಸ್ತುವಾರಿ ಶೋಯಾಬ್ ರಿಜ್ವಿ ಹೇಳಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದ ಎಐಎಂಐಎಂನ ಗುಜರಾತ್ ಅಧ್ಯಕ್ಷ ಸಬೀರ್ ಕಬ್ಲಿವಾಲಾ ಸೇರಿದಂತೆ ಸುಮಾರು 50 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಕೋಲ್ಕತ್ತದಲ್ಲಿಯೂ ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಮಸೂದೆಯನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ಈ ಮಸೂದೆಯು ದೇಶವನ್ನು ವಿಭಜಿಸಲು ಬಿಜೆಪಿ ಮಾಡಿದ ತಂತ್ರವಾಗಿದೆ. ಅವರು ತಮ್ಮ ಬಹುಮತದ ಕಾರಣದಿಂದಾಗಿ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಮಸೂದೆಯನ್ನು ಅಂಗೀಕರಿಸಿದ್ದಾರೆ. ನಾವು ಈ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸುತ್ತೇವೆ. ಇದು ಕೇವಲ ಮುಸ್ಲಿಂ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನವಲ್ಲ, ನಮ್ಮ ಮೇಲೆ ಅಪಪ್ರಚಾರ ಮಾಡುವ ಪ್ರಯತ್ನವೂ ಆಗಿದೆ ಎಂದು ಪ್ರತಿಭಟನಾಕಾರರಲ್ಲಿ ಒಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.