ಅನ್ನಪೂರ್ಣಾ ದೇವಿ
ನವದೆಹಲಿ: ಕೇಂದ್ರ ಸರ್ಕಾರದ ಆರ್ಥಿಕ ನೆರವು ಹಾಗೂ ಬೆಂಬಲ ಇದ್ದರೂ ಮಹಿಳೆಯರ ಸುರಕ್ಷತೆ ಹಾಗೂ ಸಬಲೀಕರಣಕ್ಕೆ ಅಗತ್ಯವಿರುವ ಕ್ರಮಗಳನ್ನು ಜಾರಿಗೊಳಿಸಲು ದೆಹಲಿ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣಾ ದೇವಿ ಆರೋಪಿಸಿದ್ದಾರೆ.
‘ಸಮಸ್ಯೆಗೆ ಸಿಲುಕಿದ ಮಹಿಳೆಯರಿಗೆ ನೆರವಾಗುವ ಉದ್ದೇಶದೊಂದಿಗೆ ನಿರ್ಭಯಾ ನಿಧಿಯಡಿ ಕಾರ್ಯ ನಿರ್ವಹಿಸುವ ಒನ್ ಸ್ಟಾಪ್ ಸೆಂಟರ್‌ನ ಸಿಬ್ಬಂದಿಗೆ ದೆಹಲಿ ಸರ್ಕಾರ ವೇತವನ್ನೇ ಪಾವತಿಸಿಲ್ಲ. ದೆಹಲಿ ಸರ್ಕಾರದ ಕಂದಾಯ ಇಲಾಖೆಯ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡಿದ್ದ ದೆಹಲಿ ಹೈಕೋರ್ಟ್, ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಿತ್ತು. ಜತೆಗೆ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ನಿರ್ದೇಶಿಸಿತ್ತು. ಕೇಂದ್ರ ಸರ್ಕಾರವು ಹಲವು ಕಾರ್ಯಕ್ರಮಗಳ ಮೂಲಕ ನೆರವಾಗಲು ಬಯಸಿದರೂ, ರಾಜ್ಯಮಟ್ಟದಲ್ಲಿ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ’ ಎಂದು ಆರೋಪಿಸಿದರು.
ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಗಳ ವಿಚಾರಣೆಗೆ ಸ್ಥಾಪಿಸಲಾದ ವಿಶೇಷ ತ್ವರಿತಗತಿಯ ನ್ಯಾಯಾಲಯಗಳು ಕಾರ್ಯ ನಿರ್ವಹಿಸದಿರುವುದಕ್ಕೆ ಪಶ್ಚಿಮ ಬಂಗಾಳ ಸರ್ಕಾರವನ್ನು ಅನ್ನಪೂರ್ಣಾ ಅವರು ತರಾಟೆಗೆ ತೆಗೆದುಕೊಂಡರು.
‘ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಸರ್ಕಾರದ ಬದ್ಧತೆಯ ಪರಿಣಾಮ ರಾಷ್ಟ್ರವ್ಯಾಪಿ ಇರುವ 802 ಒನ್ ಸ್ಟಾಪ್ ಸೆಂಟರ್ ಮೂಲಕ 10 ಲಕ್ಷ ಮಹಿಳೆಯರಿಗೆ ನೆರವು ಸಿಕ್ಕಿದೆ. ಜತೆಗೆ 752 ವಿಶೇಷ ತ್ವರಿತಗತಿಯ ನ್ಯಾಯಾಲಯಗಳ ಮೂಲಕ 2.66 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿವೆ. ಮಹಿಳಾ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರವು, ಲಿಂಗಾಧಾರಿತ ಬಜೆಟ್ ಮೂಲಕ 2013–14ರಲ್ಲಿ ₹97 ಸಾವಿರ ಕೋಟಿ ನೀಡುತ್ತಿತ್ತು. 2024–25ರಲ್ಲಿ ₹3 ಲಕ್ಷ ಕೋಟಿ ಘೋಷಿಸಿದೆ’ ಎಂದು ತಿಳಿಸಿದ್ದಾರೆ.
‘ಶಿಕ್ಷಣ, ಆರೋಗ್ಯ ಹಾಗೂ ಆರ್ಥಿಕ ವಲಯದಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳಲು ಪೂರಕ ವಾತಾವರಣವನ್ನು ಸರ್ಕಾರ ಸಿದ್ಧಪಡಿಸಿದೆ. ಇದರ ಪರಿಣಾಮವಾಗಿ ರಾಜಕೀಯವನ್ನೂ ಒಳಗೊಂಡು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಿದ್ದಾರೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.