ADVERTISEMENT

'ಕೊರೊನಾ ವೈರಸ್' ಪ್ರಶಾಂತ್ ಕಿಶೋರ್ ಪಕ್ಷ ಬಿಟ್ಟರೆ ಸಂತೋಷ: ಜೆಡಿಯು

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 10:23 IST
Last Updated 29 ಜನವರಿ 2020, 10:23 IST
ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್   

ನವದೆಹಲಿ:ಬಂಡಾಯವೆದ್ದಿರುವ ಪಕ್ಷದ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಅವರನ್ನು ಚೀನಾದಲ್ಲಿ ನೂರಾರು ಜನರನ್ನು ಬಲಿ ತೆಗೆದುಕೊಂಡಿರುವ ಕೊರೊನಾ ವೈರಸ್‌‌ಗೆ ಜೆಡಿಯು ಹೋಲಿಸಿದೆ.'ಕೊರೊನಾ ವೈರಸ್'ಪ್ರಶಾಂತ್ ಕಿಶೋರ್ ಪಕ್ಷ ಬಿಡುತ್ತಿರುವುದು ಸಂತೋಷದ ವಿಷಯಎಂದು ಜೆಡಿಯು ವಕ್ತಾರಅಜಯ್ ಅಲೋಕ್ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯ ಮೇರೆಗೆ ಪ್ರಶಾಂತ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್‌ ಅವರು ಹೇಳಿದ್ದರು. ಇದರ ವಿರುದ್ಧ ಕಿಡಿಕಾರಿದ್ದ ಜೆಡಿಯು ಉಪಾಧ್ಯಕ್ಷ, ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್, ನಿತೀಶ್ ಕುಮಾರ್ ಸುಳ್ಳುಗಾರನೆಂದು ಆರೋಪಿಸಿದ್ದರು.

ಸುದ್ದಿಸಂಸ್ಥೆ ಎಎನ್‌ಐನೊಂದಿಗೆ ಮಾತನಾಡಿದ ಅಜಯ್ ಅಲೋಕ್, "ಈ ಮನುಷ್ಯ ನಂಬಿಕೆಗೆ ಅನರ್ಹ. ಮೋದಿಜಿ ಮತ್ತು ನಿತೀಶ್‌ಜಿ ಅವರ ನಂಬಿಕೆಯನ್ನು ಪಡೆಯಲಾಗಲಿಲ್ಲ. ಅವರು ಎಎಪಿಗಾಗಿ ಕೆಲಸ ಮಾಡುತ್ತಾರೆ, ರಾಹುಲ್ ಗಾಂಧಿಯೊಂದಿಗೆ ಮಾತನಾಡುತ್ತಾರೆ; ಅಲ್ಲದೆ ಮಮತಾ ದೀದಿಯೊಂದಿಗೆ ಕುಳಿತುಕೊಳ್ಳುತ್ತಾರೆ. ಹೀಗಿರುವಾಗ ಅವರನ್ನು ಯಾರು ನಂಬುತ್ತಾರೆ? ಈ ಕೊರೊನಾ ವೈರಸ್ ನಮ್ಮನ್ನು ಬಿಟ್ಟು ಹೋದರೆ ನಾವು ಸಂತೋಷ ಪಡುತ್ತೇವೆ. ಅವರಿಗಿಷ್ಟ ಬಂದ ಕಡೆಗೆ ಅವರು ಹೋಗಬಹುದು" ಎಂದು ಹೇಳಿದ್ದಾರೆ.

ADVERTISEMENT

2018ರಲ್ಲಿ ಜೆಡಿಯುಗೆ ಸೇರ್ಪಡೆಯಾದ ಪ್ರಶಾಂತ್ ಕಿಶೋರ್, ಕೆಲವೇ ವಾರಗಳಲ್ಲಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷನಾಗಿ ಬಡ್ತಿ ಪಡೆದರು. ಬಳಿಕ ನಿತೀಶ್ ಕುಮಾರ್ ಅವರ ಆಪ್ತ ವಲಯದಲ್ಲೇ ಗುರುತಿಸಿಕೊಂಡಿದ್ದರು. ಇತ್ತೀಚಿನವರೆಗೂ ಆಪ್ತರಾಗಿಯೇ ಇದ್ದವರು ಸಿಎಎಯನ್ನು ಬೆಂಬಲಿಸುವ ಜೆಡಿಯು ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದರು.

ಇದಕ್ಕೂ ಮುನ್ನ ಜೆಡಿಯು ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ನಿತೀಶ್ ಕುಮಾರ್, ಅವರಿಗೆ ಬೇಕಾಗುವವರೆಗೂ ಜೆಡಿಯುನಲ್ಲಿ ಮುಂದುವರಿಯಲಿ. ಬೇಡವಾದಲ್ಲಿ ಪಕ್ಷ ತೊರೆಯಲಿ. ಅವರು ಎಎಪಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪತ್ರಿಕೆಗಳಿಂದ ತಿಳಿಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆ ಮೇರೆಗೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಪಕ್ಷದಲ್ಲೇ ಅವರು ಉಳಿದರೆ ಸಂತೋಷ, ಆದರೆ ಪಕ್ಷದ ನಿರ್ಧಾರಗಳನ್ನು ಅವರು ಗೌರವಿಸಬೇಕು ಎಂದು ಹೆಸರು ಹೇಳದೆಯೇ ಹೇಳಿದ್ದರು.

ಜೆಡಿಯು ನಾಯಕನ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಪ್ರಶಾಂತ್ ಕಿಶೋರ್, ನೀವುನನ್ನನ್ನು ಏಕೆ ಮತ್ತು ಹೇಗೆ ಪಕ್ಷಕ್ಕೆ ಸೇರಿಸಿಕೊಂಡಿರಿ ಎಂಬುದರ ಬಗ್ಗೆ ಸುಳ್ಳು ಹೇಳಿದ್ದೀರಿ. ನೀವು ನಿಜವನ್ನೇ ಹೇಳುತ್ತಿದ್ದರೆ, ಅಮಿತ್ ಶಾ ಶಿಫಾರಸು ಮಾಡಿರುವ ವ್ಯಕ್ತಿಯ ಮಾತನ್ನು ಕೇಳದಿರುವ ಧೈರ್ಯ ನಿಮಗಿನ್ನೂ ಇದೆ ಎಂಬುದನ್ನು ಯಾರು ನಂಬುತ್ತಾರೆ ಎಂದು ವಾಗ್ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.