ADVERTISEMENT

ಸ್ಟ್ಯಾನ್‌ ಸ್ವಾಮಿಗೆ ಸಿಪ್ಪರ್‌, ಸ್ಟ್ರಾ ಕೊಟ್ಟಿದ್ದೇವೆ: ತಲೋಜಾ ಜೈಲಿನ ಅಧಿಕಾರಿ

ತಲೋಜಾ ಜೈಲಿನ ಹಿರಿಯ ಅಧಿಕಾರಿಯ ಸ್ಪಷ್ಟನೆ

ಪಿಟಿಐ
Published 30 ನವೆಂಬರ್ 2020, 1:16 IST
Last Updated 30 ನವೆಂಬರ್ 2020, 1:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಬುಡಕಟ್ಟು ಸಮುದಾಯದ ಹೋರಾಟಗಾರ ಫಾದರ್‌ ಸ್ಟ್ಯಾನ್‌ ಸ್ವಾಮಿ ಅವರಿಗೆ ನೀರು ಕುಡಿಯಲು ಬೇಕಿರುವ ಸ್ಟ್ರಾ ಮತ್ತು ಸಿಪ್ಪರ್‌ ಅನ್ನು ನೀಡಿದ್ದೇವೆ. ಜೊತೆಗೆ ಇತರ ಅಗತ್ಯ ಸೌಕರ್ಯಗಳನ್ನೂ ಕಲ್ಪಿಸಲಾಗಿದೆ’ ಎಂದು ಇಲ್ಲಿನ ತಲೋಜಾ ಜೈಲಿನ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಎಲ್ಗಾರ್‌ ಪರಿಷತ್‌ ಪ‍್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮಿ ಅವರನ್ನು ಅಕ್ಟೋಬರ್‌ 8ರಂದು ರಾಂಚಿಯ ಅವರ ನಿವಾಸದಲ್ಲಿ ಬಂಧಿಸಲಾಗಿತ್ತು. ಬಳಿಕ ಅವರನ್ನು ತಲೋಜಾ ಜೈಲಿನಲ್ಲಿಡಲಾಗಿತ್ತು.

ಪಾರ್ಕಿನ್‌ಸನ್‌ ಹಾಗೂ ಇತರ ಕಾಯಿಲೆಗಳಿಂದ ಬಳಲುತ್ತಿರುವ ತಮಗೆ ತಟ್ಟೆ ಹಾಗೂ ಲೋಟ ಹಿಡಿಯಲಾಗುತ್ತಿಲ್ಲ. ಹೀಗಾಗಿ ತಮ್ಮಿಂದ ವಶಪಡಿಸಿಕೊಂಡಿರುವ ಸ್ಟ್ರಾ ಮತ್ತು ಸಿಪ್ಪರ್‌ ಮರಳಿಸುವಂತೆ ಎನ್‌ಐಎ ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು 83 ವರ್ಷದ ಸ್ವಾಮಿ, ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಮನವಿ ಮಾಡಿದ್ದರು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಜೈಲು ಅಧಿಕಾರಿ ‘ಜೈಲಿಗೆ ಬಂದ ಮಾರನೇ ದಿನದಿಂದಲೇ ಸ್ವಾಮಿ ಅವರಿಗೆ ಸ್ಟ್ರಾ ಮತ್ತು ಸಿಪ್ಪರ್‌ ನೀಡಲಾಗಿದೆ. ಈ ಪರಿಕರಗಳನ್ನು ನಾವು ಕೊಟ್ಟಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಈ ಆರೋಪಗಳಲ್ಲಿ ಹುರುಳಿಲ್ಲ’ ಎಂದಿದ್ದಾರೆ.

‘ಸ್ವಾಮಿ ಅವರನ್ನು ನೋಡಿಕೊಳ್ಳಲು ಇಬ್ಬರು ಪರಿಚಾರಕರನ್ನು ನಿಯೋಜಿಸಲಾಗಿದೆ. ಸ್ವಾಮಿ ಅವರಿಗೆ ಗಾಲಿ ಕುರ್ಚಿ, ವಾಕಿಂಗ್‌ ಸ್ಟಿಕ್‌ ಹಾಗೂ ವಾಕರ್‌ ಅನ್ನೂ ನೀಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಸ್ವಾಮಿ ಅವರು ಪಾರ್ಕಿನ್‌ಸನ್‌ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವುದು ನಮಗೆ ಗೊತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಅಗತ್ಯ ಸೌಕರ್ಯಗಳನ್ನು ಪೂರೈಸದೆ ಸುಮ್ಮನಿರಲು ಸಾಧ್ಯವೆ’ ಎಂದೂ ಅವರು ಪ‍್ರಶ್ನಿಸಿದ್ದಾರೆ.

ದೆಹಲಿ ಮೂಲದ ಕೆಲ ವಕೀಲರು ಜೈಲಿನಲ್ಲಿರುವ ಸ್ವಾಮಿ ಅವರಿಗೆ ಶನಿವಾರ ಪಾರ್ಸೆಲ್‌ ಮೂಲಕ ಸ್ಟ್ರಾ ಮತ್ತು ಸಿಪ್ಪರ್‌ ಕಳಿಸಿಕೊಟ್ಟಿದ್ದರು. ಅದರ ಜೊತೆಗೆ ಜೈಲು ಅಧೀಕ್ಷಕರಿಗೆ ಪತ್ರವೊಂದನ್ನೂ ಬರೆದಿದ್ದರು.

‘ವಿಶೇಷ ಅಗತ್ಯವಿರುವ ಕೈದಿಗಳಿಗೆ ಅಗತ್ಯ ಸೌಕರ್ಯ ಒದಗಿಸುವುದು ಜೈಲು ಅಧಿಕಾರಿಗಳ ಕರ್ತವ್ಯ. ಕೈದಿಗಳ ಹಕ್ಕನ್ನು ಕಸಿದುಕೊಳ್ಳುವುದು ಸಂವಿಧಾನಕ್ಕೆ ಮಾಡಿದ ಅಪಚಾರ’ ಎಂದು ವಕೀಲರಾದ ನಂದಿತಾ ರಾವ್‌ ಹೇಳಿದ್ದಾರೆ.

ಜಾಮೀನು ಮಂಜೂರು ಮಾಡುವಂತೆ ಕೋರಿ ಸ್ವಾಮಿ ಅವರು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಿಶೇಷ ನ್ಯಾಯಾಲಯಕ್ಕೆ ಗುರುವಾರ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನೂ ಅವರು ಅಲ್ಲಗಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.