ADVERTISEMENT

ಸಮಯ ಬಂದಾಗ ಮೈತ್ರಿ ಸೂತ್ರದ ಬಗ್ಗೆ ತಿಳಿಸುತ್ತೇವೆ: ತೇಜಸ್ವಿ ಯಾದವ್‌

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 10:05 IST
Last Updated 30 ಡಿಸೆಂಬರ್ 2018, 10:05 IST
ತೇಜಸ್ವಿ ಯಾದವ್‌
ತೇಜಸ್ವಿ ಯಾದವ್‌   

ಪಟ್ನಾ:ಮೈತ್ರಿ ಸೂತ್ರವನ್ನು ಸಾರ್ವಜನಿಕಗೊಳಿಸುವುದಿಲ್ಲ ಎಂದಿರುವ ಬಿಹಾರ ವಿಧಾನಸಭೆ ವಿರೋಧ ಪಕ್ಷ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ವಿರೋಧ ಪಕ್ಷಗಳ ಮೈತ್ರಿಯು ಬಿಹಾರ ಮತ್ತು ಜಾರ್ಖಂಡ್‌ನಿಂದ ಎನ್‌ಡಿಎ ಅನ್ನು ಹೊರಹಾಕಲಿದ್ದು, 2019ರಲ್ಲಿ ಮೋದಿ ಸರ್ಕಾರ ಪತನಗೊಳ್ಳುವುದನ್ನು ಖಚಿತಗೊಳಿಸಲಿದೆ ಎಂದು ಹೇಳಿದ್ದಾರೆ.

ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರ್‌ಜೆಡಿ ಮುಖ್ಯಸ್ಥ ಹಾಗೂ ತಂದೆ ಲಾಲೂ ಪ್ರಸಾದ್‌ ಯಾದವ್‌ ಅವರನ್ನುಲೋಕ ಸಮತಾ ಪಕ್ಷದ ಮುಖ್ಯಸ್ಥ ಉಪೇಂದ್ರ ಕುಶ್ವಾಹ, ವಿಕಾಸಿಲ್‌ ಇನ್ಸಾನ್‌ ಪಕ್ಷದ ಮುಕೇಶ್‌ ಸಹನಿ ಅವರೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಯಾದವ್‌,‘ದಯವಿಟ್ಟು ತಾಳ್ಮೆಯಿಂದಿರಿ. ನಮ್ಮ ಕಾರ್ಯತಂತ್ರಗಳನ್ನು ಮಾಧ್ಯಮಗಳಿಗೆ ಈಗ ಹೇಳುವುದಿಲ್ಲ. ಸಮಯ ಬಂದಾಗ ತಿಳಿಸುತ್ತೇವೆ’ ಎಂದರು.ನಮ್ಮ ತಂದೆಯವರ ಆರೋಗ್ಯ ಸ್ಥಿತಿ ಬಗ್ಗೆ ಕುಟುಂಬದವರು ಕಾಳಜಿ ವಹಿಸುತ್ತಿದ್ದಾರೆ ಎಂದೂ ಹೇಳಿದರು.

ಬಿಹಾರದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತನ್ನ ಮಿತ್ರ ಪಕ್ಷಗಳೊಂದಿಗೆ ಎನ್‌ಡಿಎ ಸೀಟು ಹಂಚಿಕೆ ಮಾಡಿಕೊಂಡ ಬಳಿಕ ಈ ಮಾತುಕತೆ ನಡೆದಿದ್ದು, ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ. ‘ಬಿಜೆಪಿ ಸೋಲಿಸುವ ಸಲುವಾಗಿಯೇ ವಿರೋಧ ಪಕ್ಷಗಳು ಒಂದಾಗಿವೆ’ ಎಂದು ಯಾದವ್‌ ಹಾಗೂ ಉಪೇಂದ್ರ ಹೇಳಿಕೆ ನೀಡಿದ್ದಾರೆ. ಆದರೆ, ಸೀಟು ಹಂಚಿಕೆ ಕುರಿತು ಮಾಹಿತಿ ಬಹಿರಂಗಪಡಿಸಿಲ್ಲ.

ADVERTISEMENT

ಸಾರ್ವತ್ರಿಕ ಚುನಾವಣೆ ಬಳಿಕ ಮಹಾಮೈತ್ರಿ ಕೂಟ ಹೊಸ ಅಧ್ಯಾಯ ಬರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ತೇಜಸ್ವಿ,ತೆಲುಗು ದೇಶಂ, ಶಿವಸೇನಾ ಪಕ್ಷಗಳನ್ನು ಉದಾಹರಣೆಯಾಗಿಸಿ ಎನ್‌ಡಿಎ ಮಿತ್ರ ಪಕ್ಷಗಳು ಹಾಗೂ ಬಿಜೆಪಿ ನಡುವೆ ಬಿರುಕು ಮೂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು. ‘ಬಿಜೆಪಿಯು ಸಮಾಜವನ್ನು ಒಡೆಯುವ ಕಾರ್ಯಮಾಡುತ್ತಿದೆ. ಕೇಸರಿ ಪಕ್ಷವನ್ನು ತೊಡೆದುಹಾಕಲುಪ್ರತಿಯೊಬ್ಬರೂ ಬಯಸಿದ್ದಾರೆ’ ಎಂದು ಹೇಳಿದರು.

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ವಿರುದ್ಧ ಹರಿಹಾಯ್ದ ಲಾಲೂ ಪುತ್ರ, ಅವರಿಗೆ(ನಿತೀಶ್‌ ಕುಮಾರ್‌ಗೆ) ರಾಜ್ಯದ ಮೇಲಿನ ಕಾಳಜಿಗಿಂತ ಲೋಕಸಭೆ ಸೀಟು ಹಂಚಿಕೆ ಮೇಲಿನ ಒಲವು ಹೆಚ್ಚಾಗಿದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.