ADVERTISEMENT

ಸಂಸತ್‌ ದಾಳಿಯಂತಹ ಹೇಡಿತನದ ಕೃತ್ಯವನ್ನು ನಾವೆಂದಿಗೂ ಮರೆಯಲ್ಲ: ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಡಿಸೆಂಬರ್ 2020, 4:20 IST
Last Updated 13 ಡಿಸೆಂಬರ್ 2020, 4:20 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: 2001ರಲ್ಲಿ ಸಂಸತ್ತಿನ ಮೇಲೆ ನಡೆದ ಹೇಡಿತನದ ಕೃತ್ಯವನ್ನು ನಾವೆಂದಿಗೂ ಮರೆಯಲ್ಲ ಎಂದು ಪ್ರಧಾನಿ ಮೋದಿ ಭಾನುವಾರ ಟ್ವೀಟ್‌ ಮಾಡಿದ್ದಾರೆ. ಉಗ್ರರು ನಡೆಸಿದ ದಾಳಿಯ ಸಂದರ್ಭದಲ್ಲಿ ಮೃತಪಟ್ಟಿದ್ದ ಯೋಧರಿಗೆ ಮೋದಿ ಗೌರವ ಸಲ್ಲಿಸಿದ್ದಾರೆ.

ಈ ವಿಚಾರವಾಗಿ ಭಾನುವಾರ ಟ್ವೀಟ್‌ ಮಾಡಿರುವ ಅವರು, '2001ರ ಡಿಸೆಂಬರ್‌ 13ರಂದು ನಮ್ಮ ಸಂಸತ್ತಿನ ಮೇಲೆ ಹೇಡಿತನದ ದಾಳಿ ನಡೆಯಿತು. ಇದನ್ನು ನಾವು ಎಂದಿಗೂ ಮರೆಯುವುದಿಲ್ಲ. ನಮ್ಮ ಸಂಸತ್ತನ್ನು ರಕ್ಷಿಸುವ ಕಾರ್ಯದಲ್ಲಿ ಪ್ರಾಣ ಕಳೆದುಕೊಂಡವರ ಶೌರ್ಯ ಮತ್ತು ತ್ಯಾಗವನ್ನು ನಾವು ಸ್ಮರಿಸಿಕೊಳ್ಳುತ್ತೇವೆ. ಭಾರತ ಯಾವಾಗಲೂ ಅವರಿಗೆ ಕೃತಜ್ಞವಾಗಿ ಇರಲಿದೆ' ಎಂದು ತಿಳಿಸಿದ್ದಾರೆ.

ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಐವರು ಉಗ್ರರು 2001ರ ಡಿಸೆಂಬರ್ 13ರಂದು ಸಂಸತ್ ಭವನದ ಆವರಣದೊಳಕ್ಕೆ ನುಗ್ಗಿ ಸುಮಾರು 30 ನಿಮಿಷಗಳ ಕಾಲ ಗುಂಡು ಹಾರಿಸಿ ಒಂಬತ್ತು ಮಂದಿಯನ್ನು ಹತ್ಯೆ ಮಾಡಿದ್ದರು. ಮೃತರಲ್ಲಿ ಐವರು ದೆಹಲಿ ಪೊಲೀಸರು, ಕೇಂದ್ರ ಮೀಸಲು ಪಡೆಯ ಮಹಿಳಾ ಕಾನ್‌ಸ್ಟೇಬಲ್, ಇಬ್ಬರು ಕಾವಲು ಸಿಬ್ಬಂದಿ ಮತ್ತು ತೋಟದ ಮಾಲಿಯೊಬ್ಬರು ಸೇರಿದ್ದರು.

ADVERTISEMENT

ದಾಳಿಯಲ್ಲಿ ಗಾಯಗೊಂಡಿದ್ದ ಪತ್ರಕರ್ತರೊಬ್ಬರು ಅನಂತರ ಕೊನೆಯುಸಿರೆಳೆದಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಈ ಐವರು ಉಗ್ರರನ್ನು ಸ್ಥಳದಲ್ಲೇ ಗುಂಡಿಕ್ಕಿ ಕೊಂದಿದ್ದರು. ಘಟನೆಯಲ್ಲಿ 15 ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಅಫ್ಜಲ್ ಗುರುವನ್ನು ರಾಜಧಾನಿಯ ಬಸ್ಸೊಂದರಲ್ಲಿ ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.