ADVERTISEMENT

‘ಎಲ್ಲಿಗೂ ಹೋಗುತ್ತಿಲ್ಲ; ಅರ್ಥಮಾಡಿಕೊಳ್ಳಿ’: ಪಕ್ಷ ತೊರೆದ ಪ್ರಸಾದ್‌ಗೆ ಲಾಲು ಪತ್ರ

ಏಜೆನ್ಸೀಸ್
Published 10 ಸೆಪ್ಟೆಂಬರ್ 2020, 15:30 IST
Last Updated 10 ಸೆಪ್ಟೆಂಬರ್ 2020, 15:30 IST
ಲಾಲು ಯಾದವ್
ಲಾಲು ಯಾದವ್   

ರಾಂಚಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ತೊರೆದಿರುವ ರಘುವಂಶ್‌ ಪ್ರಸಾದ್‌ ಸಿಂಗ್‌ ಅವರಿಗೆ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರು ಪತ್ರ ಬರೆದಿದ್ದು, ‘ನೀವು ಚೇತರಿಸಿಕೊಂಡ ಕೂಡಲೇ, ನಿಮ್ಮ ನಿರ್ಧಾರದ ಬಗ್ಗೆಚರ್ಚಿಸುತ್ತೇನೆ’ ಎಂದು ತಿಳಿಸಿದ್ದಾರೆ.

‘ನೀವು ಬರೆದಿರುವ ಪತ್ರವು ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದೆ. ಇದನ್ನು ನಾನು ನಂಬಲಾರೆ. ನಾನು, ನನ್ನ ಕುಟುಂಬ ಮತ್ತು ಆರ್‌ಜೆಡಿ ಕುಟುಂಬವು ನೀವು ಶೀಘ್ರ ಗುಣಮುಖರಾಗುವುದನ್ನು ಮತ್ತು ನಮ್ಮೊಳಗೊಬ್ಬರಾಗುವುದನ್ನು ಬಯಸುತ್ತದೆ. ಕಳೆದ ನಾಲ್ಕು ದಶಕಗಳಲ್ಲಿ ಪ್ರತಿಯೊಂದು ರಾಜಕೀಯ, ಸಾಮಾಜಿಕ ಮತ್ತು ಕೌಟುಂಬಿಕ ವಿಚಾರವನ್ನೂ ಒಟ್ಟಾಗಿ ಚರ್ಚಿಸಿದ್ದೇವೆ. ಬೇಗನೆ ಚೇತರಿಸಿಕೊಳ್ಳಿ, ಮಾತನಾಡೋಣ. ನೀವು ಎಲ್ಲಿಗೂ ಹೋಗುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳಿ’ ಎಂದುಬರೆದಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿರುವ ಹೊತ್ತಿನಲ್ಲಿಪ್ರಸಾದ್‌ ಸಿಂಗ್‌ ಪಕ್ಷ ತೊರೆದಿರುವುದು ಆರ್‌ಜೆಡಿಗೆ ಹಿನ್ನಡೆಯನ್ನುಂಟು ಮಾಡಿದೆ.

ADVERTISEMENT

ಲಾಲು ಕುಟುಂಬಕ್ಕೆ ಹತ್ತಿರದವರಾಗಿದ್ದ ಸಿಂಗ್‌ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದು,ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್‌) ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಪತ್ರದ ಮೂಲಕ ತಮ್ಮ ರಾಜೀನಾಮೆ ನಿರ್ಧಾರವನ್ನು ಲಾಲು ಪ್ರಸಾದ್‌ಗೆ‌ ರವಾನಿಸಿದ್ದರು.

ವೈಶಾಲಿ ಕ್ಷೇತ್ರದ ಸಂಸದರಾಗಿರುವಲೋಕ ಜನಶಕ್ತಿ ಪಕ್ಷದ ನಾಯಕ ರಾಮ ಕಿಶೋರ್‌ ಸಿಂಗ್‌ ಅವರನ್ನು ಆರ್‌ಜೆಡಿಗೆ ಸೇರಿಸಿಕೊಳ್ಳುವ ಸಂಬಂಧದ ಮಾತುಕತೆ ಬಗ್ಗೆ ಪ್ರಸಾದ್‌ ಸಿಂಗ್‌ ಅಸಮಾಧಾನಗೊಂಡಿದ್ದರು ಎಂದುಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು ಜೂನ್‌ ತಿಂಗಳಲ್ಲಿ ಆರ್‌ಜೆಡಿಯ ಉಪಾಧ್ಯಕ್ಷ ಸ್ಥಾನಕ್ಕೆ ಸಿಂಗ್‌ ರಾಜೀನಾಮೆ ನೀಡಿದ್ದರು. ಬಳಿಕ ಬಿಹಾರ ರಾಜ್ಯ ಆರ್‌ಜೆಡಿ ಘಟಕದ ಅಧ್ಯಕ್ಷ ಜಗದಾನಂದ್‌ ಸಿಂಗ್‌ ಅವರ ಕಾರ್ಯವೈಖರಿಯ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.