ADVERTISEMENT

ಸಿಎಂ ಪ್ರಚಾರದಲ್ಲಿ ಬ್ಯುಸಿ; ನೀವು ಮಾಸ್ಕ್‌ ಧರಿಸಿ: ದೆಹಲಿ ಜನತೆಗೆ ಕೇಂದ್ರ ಸಚಿವ

ಪಿಟಿಐ
Published 5 ನವೆಂಬರ್ 2022, 4:23 IST
Last Updated 5 ನವೆಂಬರ್ 2022, 4:23 IST
ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ
ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ   

ನವದೆಹಲಿ: ವಾಯು ಮಾಲಿನ್ಯದಿಂದ ರಕ್ಷಿಸಿಕೊಳ್ಳಲು ಮಾಸ್ಕ್‌ ಧರಿಸಿ ಎಂದು ದೆಹಲಿ ಜನತೆಗೆ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಅವರು ಸಲಹೆ ನೀಡಿದ್ದಾರೆ.

ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ದೆಹಲಿ ಮುಖ್ಯಮಂತ್ರಿಗಳಿಗೆ ಬಿಡುವಿಲ್ಲ. ಹಾಗಾಗಿ ತಮ್ಮನ್ನು ತಾವು ಮಾಲಿನ್ಯ ಸಮಸ್ಯೆಯಿಂದ ರಕ್ಷಿಸಿಕೊಳ್ಳಲು ಮಾಸ್ಕ್‌ ಧರಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ.

ರಾಜಧಾನಿಯಲ್ಲಿ ವಾಯು ಗುಣಮಟ್ಟವು ತೀವ್ರ ಹದಗೆಟ್ಟಿರುವ ಕಾರಣ ಇಲ್ಲಿನ ಪ್ರಾಥಮಿಕ ಶಾಲೆಗಳಿಗೆ ಶನಿವಾರದಿಂದ ರಜೆ ಘೋಷಿಸಲಾಗಿದೆ. ಮುಂದಿನ ಆದೇಶದ ವರೆಗೆ ಶಾಲೆ ತೆರೆಯುವಂತಿಲ್ಲ ಎಂದೂ ಹೇಳಿದೆ. ಇನ್ನು ಶೇ 50ರಷ್ಟು ಸಿಬ್ಬಂದಿಗೆ ಮನೆಯಲ್ಲಿಯೇ ಕೆಲಸ ಮಾಡಲು ಅವಕಾಶ ನೀಡಿದೆ. ಖಾಸಗಿ ಕಚೇರಿಗಳಿಗೂ ಇದನ್ನೇ ಅನುಸರಿಸುವಂತೆ ಸಲಹೆ ನೀಡಿದೆ. ಮಾಲಿನ್ಯ ಪ್ರಮಾಣವು ಅಪಾಯಕರ ಮಟ್ಟಕ್ಕೆ ಹೆಚ್ಚಿರುವ ಹಿನ್ನೆಲೆ ಮತ್ತು ಆರೋಗ್ಯ ಸಮಸ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಈ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ADVERTISEMENT

ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಎರಡು ದಿನಗಳಿಂದ 'ತೀವ್ರ ಮಾಲಿನ್ಯ' ಸ್ಥಿತಿಯಲ್ಲಿದೆ.

'ವಾಯು ಮಾಲಿನ್ಯದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ದೆಹಲಿಯ ಜನತೆಗೆ ಮಾಸ್ಕ್‌ ಧರಿಸುವಂತೆ ಒತ್ತಾಯಿಸುತ್ತಿದ್ದೇನೆ. ಏಕೆಂದರೆ, ಕೇಜ್ರಿವಾಲ್‌ ಅವರು ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿ ಉಚಿತ ಕೊಡುಗೆಗಳ ಬಗ್ಗೆ ಮಾತನಾಡುವಲ್ಲಿ ಬ್ಯುಸಿ ಇದ್ದಾರೆ. ಕೋಟ್ಯಂತರ ದೆಹಲಿಯ ತೆರಿಗೆ ಹಣವನ್ನು ಈ ಎರಡು ರಾಜ್ಯಗಳಲ್ಲಿ ಜಾಹೀರಾತು ನೀಡಲು ವ್ಯಯಿಸುವಲ್ಲಿ ಬ್ಯುಸಿ ಇದ್ದಾರೆ' ಎಂದು ಮನ್‌ಸುಖ್‌ ಮಾಂಡವೀಯ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.