ADVERTISEMENT

ನವಭಾರತಕ್ಕೆ ಸ್ವಾಗತ!: ಜೈರಾಮ್‌ ರಮೇಶ್‌

‘ವಾರ್‌ ಅಂಡ್‌ ಪೀಸ್‌’ ಬಗ್ಗೆ ಹೈಕೋರ್ಟ್‌ ಪ್ರಶ್ನೆಗೆ ದಿಗ್ಭ್ರಮೆ

ಪಿಟಿಐ
Published 29 ಆಗಸ್ಟ್ 2019, 18:27 IST
Last Updated 29 ಆಗಸ್ಟ್ 2019, 18:27 IST
ಜೈರಾಮ್‌ ರಮೇಶ್‌ 
ಜೈರಾಮ್‌ ರಮೇಶ್‌    

ನವದೆಹಲಿ: ಲಿಯೊ ಟಾಲ್‌ಸ್ಟಾಯ್‌ ಅವರ ‘ವಾರ್‌ ಅಂಡ್‌ ಪೀಸ್‌’ ಪುಸ್ತಕದ ಪ್ರತಿಯನ್ನು ಏಕೆ ಇರಿಸಿಕೊಂಡಿದ್ದೀರಿ ಎಂದು ಆರೋಪಿಯೊಬ್ಬರಿಗೆ ಬಾಂಬೆ ಹೈಕೋರ್ಟ್‌ ಪ್ರಶ್ನಿಸಿರುವುದು ದಿಗ್ಭ್ರಮೆಗೊಳಿಸಿದೆ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ತಿಳಿಸಿದ್ದಾರೆ.

ಎಲ್ಗರ್‌ ಪರಿಷದ್‌–ಭೀಮ ಕೋರೆಗಾವ್‌ ಪ್ರಕರಣದ ವಿಚಾರಣೆ ಬುಧವಾರ ನಡೆದ ವೇಳೆ, ‘ವಾರ್‌ ಅಂಡ್‌ ಪೀಸ್‌‘ ಪುಸ್ತಕದಂತಹ ಆಕ್ಷೇಪಾರ್ಹ ಪುಸ್ತಕವನ್ನು ಇರಿಸಿಕೊಂಡಿರುವುದರ ಬಗ್ಗೆ ವಿವರಣೆ ನೀಡಲು ಆರೋಪಿ ವೆರ್ನಾನ್‌ ಗೋನ್ಸಾಲ್ವಿಸ್‌ಗೆ ಏಕಸದಸ್ಯ ಪೀಠದನ್ಯಾಯಮೂರ್ತಿ ಸಾರಂಗ್‌ ಕೋತ್ವಾಲ್‌ ಸೂಚಿಸಿದ್ದರು.ಈ ಕುರಿತು ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿರುವ ರಮೇಶ್‌, ‘ಹೈಕೋರ್ಟ್‌ ನ್ಯಾಯಮೂರ್ತಿಯೊಬ್ಬರು ಈ ರೀತಿ ಪ್ರಶ್ನಿಸಿರುವುದು ದಿಗ್ಭ್ರಮೆಗೊಳಿಸಿದೆ. ಇದು ಜಗತ್ತಿನ ಶ್ರೇಷ್ಠ ಕೃತಿಗಳಲ್ಲೊಂದು. ಮಹಾತ್ಮಗಾಂಧಿಯವರ ಮೇಲೆ ಟಾಲ್‌ಸ್ಟಾಯ್‌ ಪ್ರಭಾವ ಬೀರಿದ್ದರು.ನವ ಭಾರತಕ್ಕೆ ಸ್ವಾಗತ!’ ಎಂದಿದ್ದಾರೆ.

ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಗೋನ್ಸಾಲ್ವಿಸ್‌ ಅನ್ನು ಬಂಧಿಸಿದ್ದ ಪುಣೆ ಪೊಲೀಸರು, ಮುಂಬೈನಲ್ಲಿರುವಗೋನ್ಸಾಲ್ವಿಸ್‌ ಮನೆ ಪರಿಶೀಲಿಸಿದ್ದರು. ಈ ಸಂದರ್ಭದಲ್ಲಿ ವಾರ್‌ ಅಂಡ್‌ ಪೀಸ್‌ ಪುಸ್ತಕವನ್ನು ಪುಣೆ ಪೊಲೀಸರು ಜಪ್ತಿ ಮಾಡಿದ್ದರು. ಜತೆಗೆ ಕಬೀರ್‌ ಕಾಲ ಮಂಚ್‌ ಬಿಡುಗಡೆಗೊಳಿಸಿರುವ ‘ರಾಜ್ಯ ಧಮನ್‌ ವಿರೋಧಿ’ ಹೆಸರಿನ ಸಿ.ಡಿ ಸೇರಿದಂತೆ ಹಲವು ಕೃತಿಗಳು,ಸಿ.ಡಿಗಳು ಲಭ್ಯವಾಗಿವೆ ಎಂದು ಪೊಲೀಸರು ತಿಳಿಸಿದ್ದರು.

ADVERTISEMENT

ಶ್ರೇಷ್ಠ ಕೃತಿ ಎಂದು ತಿಳಿದಿದೆ: ನ್ಯಾಯಮೂರ್ತಿ

‘ವಾರ್‌ಅಂಡ್‌ ಪೀಸ್‌ ಕೃತಿ ಶ್ರೇಷ್ಠ ಕೃತಿಗಳಲ್ಲೊಂದು ಎಂದು ತಿಳಿದಿದೆ. ಪರಿಶೀಲನೆ ಸಂದರ್ಭದಲ್ಲಿ ಪೊಲೀಸರು ವಶಕ್ಕೆ ಪಡೆದ ಎಲ್ಲ ಪುಸ್ತಕಗಳೂ ಅಪರಾಧವನ್ನು ಸಾಬೀತುಗೊಳಿಸುವಂತಹ ಸಾಕ್ಷ್ಯ ಎಂದು ಪರಿಗಣಿಸಿಲ್ಲ’ ಎಂದು ಗುರುವಾರ ನ್ಯಾಯಮೂರ್ತಿ ಕೊತ್ವಾಲ್‌ ಹೇಳಿದರು.

‘ಮನೆಯಲ್ಲಿ ದೊರೆತ ಯಾವುದೇ ಪುಸ್ತಕಗಳನ್ನು ಸರ್ಕಾರ ನಿಷೇಧಿಸಿರಲಿಲ್ಲ’ ಎಂದು ಗೋನ್ಸಾಲ್ವಿಸ್‌ ಪರ ವಕೀಲರು ಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾ.ಕೋತ್ವಾಲ್‌, ‘ನೀವು ನಿಮ್ಮ ವಾದವನ್ನು ಮಂಡಿಸಿದ್ದೀರಿ.

ವಾರ್‌ ಆ್ಯಂಡ್‌ ಪೀಸ್‌ ಕೃತಿಯ ಬಗ್ಗೆ ನನಗೆ ತಿಳಿದಿದೆ. ನಿನ್ನೆ ಆರೋಪ ಪಟ್ಟಿಯನ್ನು ಓದುತ್ತಿದ್ದೆ. ಕೈಬರಹ ಸರಿಯಾಗಿರಲಿಲ್ಲ’ ಎಂದಿದ್ದಾರೆ.ಕೃತಿಯನ್ನು ‘ಆಕ್ಷೇಪಾರ್ಹ ವಸ್ತು’ ಎಂದು ಉಲ್ಲೇಖಿಸಿದ್ದ ನ್ಯಾಯಮೂರ್ತಿ ಅವರ ಹೇಳಿಕೆಗೆ ಟ್ವಿಟರ್‌ನಲ್ಲಿ ಸಾಕಷ್ಟು ವಿರೋಧ ಕೇಳಿಬಂದಿತ್ತು. #WarAndPeace ಸಾಕಷ್ಟು ಟ್ರೆಂಡ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.