ಕೋಲ್ಕತ್ತ: ಪಶ್ಚಿಮ ಬಂಗಾಳದ ವಿಷ್ಣುಪುರದ ಬಿಜೆಪಿಯ ಮಾಜಿ ಶಾಸಕ ತನ್ಮಯ್ ಘೋಷ್ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೋಮವಾರ ಸೇರ್ಪಡೆಗೊಂಡಿದ್ದಾರೆ.
ಈ ಕುರಿತು ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಅವರು, 'ಬಿಜೆಪಿಯು ಸೇಡಿನ ರಾಜಕೀಯದಲ್ಲಿ ತೊಡಗಿದೆ. ಅವರು(ಬಿಜೆಪಿ) ಕೇಂದ್ರದ ಏಜೆನ್ಸಿಗಳನ್ನು ಬಳಸಿ ಜನರ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸುವಂತೆ ನಾನು ಎಲ್ಲ ರಾಜಕಾರಣಿಗಳಲ್ಲಿ ಕೇಳಿಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ 292 ಸ್ಥಾನಗಳ ಪೈಕಿ ಟಿಎಂಸಿ 212 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಮೂಲಕ ಮಮತಾ ಸತತ 3ನೇ ಅವಧಿಗೆ ಅಧಿಕಾರ ಉಳಿಸಿಕೊಂಡಿದ್ದರು. 77 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿರುವ ಬಿಜೆಪಿಯು ಪ್ರಮುಖ ವಿರೋಧ ಪಕ್ಷವಾಗಿ ರೂಪುಗೊಂಡಿತ್ತು.
ಮಮತಾ ಬ್ಯಾನರ್ಜಿ ಅವರು ಮತ್ತೆ ಸಿಎಂ ಆದ ನಂತರ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಮುಕುಲ್ ರಾಯ್ ಮತ್ತು ಅವರ ಪುತ್ರ ಸುಭ್ರಾಘ್ಷು ರಾಯ್ ಅವರು ಎರಡು ತಿಂಗಳ ಹಿಂದೆ ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) ಸೇರ್ಪಡೆಯಾಗಿದ್ದರು.
ಉತ್ತರ ಬಂಗಾಳದಲ್ಲಿ ಪಕ್ಷದ ಸಂಘಟನಾ ಚತುರ ಎನಿಸಿಕೊಂಡಿದ್ದ ಅಲಿಪುರದೂರ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಗಂಗಾ ಪ್ರಸಾದ್ ಶರ್ಮಾ ಅವರು ಜೂನ್‌ನಲ್ಲಿ ಬಿಜೆಪಿ ತೊರೆದು ಟಿಎಂಸಿ ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.