ADVERTISEMENT

ಸಂದೇಶ್‌ಖಾಲಿ: ಕಲ್ಕತ್ತ ಹೈಕೋರ್ಟ್ ಆದೇಶ ಬೆನ್ನಲ್ಲೇ ಬಿಜೆಪಿಯಿಂದ ದೂರುಗಳ ಸ್ವೀಕಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮಾರ್ಚ್ 2024, 12:24 IST
Last Updated 17 ಮಾರ್ಚ್ 2024, 12:24 IST
<div class="paragraphs"><p>ಸಂತ್ರಸ್ತರು ದೂರುಗಳನ್ನು ಸಲ್ಲಿಸುತ್ತಿರುವ ದೃಶ್ಯ</p></div>

ಸಂತ್ರಸ್ತರು ದೂರುಗಳನ್ನು ಸಲ್ಲಿಸುತ್ತಿರುವ ದೃಶ್ಯ

   

ಕೋಲ್ಕತ್ತ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಕಲ್ಕತ್ತ ಹೈಕೋರ್ಟ್‌ ಆದೇಶ ಪ್ರಕಟವಾದ ಬೆನ್ನಲ್ಲೇ ಸಂತ್ರಸ್ತರಿಂದ ದೂರುಗಳನ್ನು ಸ್ವೀಕರಿಸಲು ಬಿಜೆಪಿ ಶಿಬಿರಗಳನ್ನು ತೆರೆದಿದೆ.

‘ನಮಗೆ ಸಾಕಷ್ಟು ದೂರುಗಳು ಬರುತ್ತಿವೆ. ಜನರನ್ನು ಹೊಡೆಯಲಾಗುತ್ತಿದೆ. ವೈದ್ಯರು ಜನರಿಗೆ ಚಿಕಿತ್ಸೆ ನೀಡಲು ಹೆದರುತ್ತಿದ್ದಾರೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಇದನ್ನೆಲ್ಲ ಮೌನವಾಗಿ ನೋಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಪ್ರಿಯಾಂಕಾ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ಅಧಿಕಾರದ ದುರಾಸೆ ಹೊಂದಿರುವ ಮಮತಾ ಬ್ಯಾನರ್ಜಿ ಅವರಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುವ ಯೋಗ್ಯತೆ ಇಲ್ಲ. ವಿಕ್ಟೋರಿಯಾ ಮತ್ತು ಈಡನ್ ಗಾರ್ಡನ್ ಪಶ್ಚಿಮ ಬಂಗಾಳದ ವಾಸ್ತವವಲ್ಲ. ಸದ್ಯ ಬಂಗಾಳದಲ್ಲಿ ಜನರ ಹತ್ಯೆಯಾಗುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಜನರನ್ನು ಬಲವಂತದಿಂದ ಮತಾಂತರ ಮಾಡಲಾಗುತ್ತಿದ್ದು, ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ’ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಮತ್ತು ಗ್ರಾಮಸ್ಥರ ಭೂಮಿ ಕಸಿದಿರುವ ಪ್ರಕರಣದ ಆರೋಪಿ ಹಾಗೂ ಟಿಎಂಸಿ ಮುಖಂಡ ಶಹಜಹಾನ್‌ ಶೇಖ್‌ ಅವರನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಸದ್ಯ ಆರೋಪಿ ಸಿಬಿಐ ಕಸ್ಟಡಿಯಲ್ಲಿದ್ದಾರೆ.

ಇದಕ್ಕೂ ಮುನ್ನ ಜನವರಿ 5ರಂದು ಇ.ಡಿ ಅಧಿಕಾರಿಗಳ ಮೇಲೆ ಗುಂಪೊಂದು ದಾಳಿ ನಡೆಸಿದ ಬಳಿಕ ಶಹಜಹಾನ್‌ ಅವರು ತಲೆ ಮರೆಸಿಕೊಂಡಿದ್ದರು. ಶಹಜಹಾನ್‌ ಬಂಧನಕ್ಕೊಳಗಾದ ತಕ್ಷಣವೇ ಆರು ವರ್ಷಗಳ ಕಾಲ ಅವರನ್ನು ಟಿಎಂಸಿ ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.