ADVERTISEMENT

ಪ.ಬಂಗಾಳದಲ್ಲಿ 2ನೇ ಹಂತದಲ್ಲೂ ಎಲ್ಲ 30 ಸ್ಥಾನಗಳಲ್ಲಿ ಗೆಲುವು: ವಿಜಯವರ್ಗೀಯ

ಏಜೆನ್ಸೀಸ್
Published 2 ಏಪ್ರಿಲ್ 2021, 2:02 IST
Last Updated 2 ಏಪ್ರಿಲ್ 2021, 2:02 IST
ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀಯ
ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀಯ   

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆಗೆ ನಡೆದ ಎರಡನೇ ಹಂತದ ಚುನಾವಣೆಯಲ್ಲೂ ಎಲ್ಲ 30 ಸ್ಥಾನಗಳಲ್ಲೂ ಗೆಲುವು ದಾಖಲಿಸುವುದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಂಗಾಳ ಉಸ್ತುವಾರಿ ಕೈಲಾಶ್ ವಿಜಯವರ್ಗೀಯ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಹಂತದಲ್ಲಿ 30 ಸ್ಥಾನಗಳಿಗೆ ಏಪ್ರಿಲ್ 1 ಗುರುವಾರದಂದು ಮತದಾನ ನಡೆದಿತ್ತು.

'ಕಳೆದ 50 ವರ್ಷಗಳ ಪಶ್ಚಿಮ ಬಂಗಾಳ ಇತಿಹಾಸದಲ್ಲೇ ಇಷ್ಟೊಂದು ಶಾಂತಿಯುತವಾಗಿ ಮತದಾನ ನಡೆದಿಲ್ಲ. 90 ಪ್ರತಿಶತದಷ್ಟು ಮತಗಟ್ಟೆಗಳಲ್ಲಿ ಜನರು ಭಯಭೀತಿಯಿಲ್ಲದೆ ಮತ ಚಲಾಯಿಸಿದ್ದಾರೆ. ಕೆಲವೊಂದು ಸಣ್ಣಪುಟ್ಟ ಘಟನೆಗಳು ನಡೆದಿವೆ. ಆದರೆ ಪ್ರಮುಖ ವಿಷಯ ಏನೆಂದರೆ ಹಿಂದೆಲ್ಲ ಗೂಂಡಾಗಳು ಬೂತ್ ಅನ್ನು ವಶಪಡಿಸಿಕೊಳ್ಳುತ್ತಿದ್ದರು. ಅಲ್ಲದೆ ಮತದಾರರಿಗೆ ಮತ ಚಲಾಯಿಸಲು ಅವಕಾಶ ನೀಡುತ್ತಿರಲಿಲ್ಲ. ಆದರೆ ಅದೀಗ ಕೊನೆಗೊಂಡಿದೆ' ಎಂದು ಹೇಳಿದ್ದಾರೆ.

ADVERTISEMENT

'ಪ್ರಜಾಪ್ರಭುತ್ವಕ್ಕೆ ಚುನಾವಣಾ ಆಯೋಗ ಮತ್ತು ಕೇಂದ್ರ ಪಡೆಗಳು ನೀಡಿದ ಕೊಡುಗೆಗಾಗಿ ನಾನು ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ಮತದಾನ ಉತ್ತಮವಾಗಿ ನಡೆದಿದ್ದು, ಎರಡನೇ ಹಂತದಲ್ಲೂ ಎಲ್ಲ 30 ಸ್ಥಾನಗಳಲ್ಲಿ ಬಿಜೆಪಿ ಗೆಲುವು ದಾಖಲಿಸಲಿದೆ' ಎಂದು ಭವಿಷ್ಯ ನುಡಿದರು.

ಕೇಂದ್ರ ಪಡೆಗಳು ಅಮಿತ್ ಶಾ ಸೂಚನೆಯಂತೆ ಕೆಲಸ ನಿರ್ವಹಿಸುತ್ತಿದೆ ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಗಳಿಗೆ ಪ್ರತ್ರಿಕ್ರಿಯಿಸಿರುವ ವಿಜಯವರ್ಗೀಯ, 'ಇದು ಸೋಲಿನ ಸಂಕೇತವೆಂದು ನಾನು ಭಾವಿಸುತ್ತೇನೆ. ಜನರು ಅವರೊಂದಿಗಿಲ್ಲ ಎಂಬ ಸತ್ಯವನ್ನು ಅರಿತಿದ್ದಾರೆ. ಈ ಮತದಾನವು 'ಮಮತಾ vs ಜನರ' ನಡುವೆಯಾಗಿದೆ. ಜನರು ಅವರೊಂದಿಗಿಲ್ಲ. ಅವರು ಎಲ್ಲಿಗೆ ಹೋದರೂ ಜನರು 'ಜಯ್ ಶ್ರೀ ರಾಮ್' ಘೋಷಣೆಗಳನ್ನು ಕೂಗುತ್ತಾರೆ. ಆದರೆ ಒಂದು ನಿರ್ಧಿಷ್ಟ ವಿಭಾಗದ ಜನರು ಮಾತ್ರ ಅವರನ್ನು ಬೆಂಬಲಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.

'ಮಮತಾ ಬ್ಯಾನರ್ಜಿ ಜಾಣೆಯಾಗಿದ್ದು ಆದರೆ ಅಜ್ಞಾನದಿಂದ ವರ್ತಿಸುತ್ತಿದ್ದಾರೆ. ಎಲ್ಲಿಲ್ಲಿ ಮತದಾನ ನಡೆಯುತ್ತಿದೆಯೋ ಅಲ್ಲಿ ನಾಯಕರು ಪ್ರಚಾರಕ್ಕೆ ಹೋಗಲು ಸಾಧ್ಯವಿಲ್ಲ. ಬೇಕಿದ್ದರೆ ಬೇರೆ ಸ್ಥಳಗಳಿಗೆ ಹೋಗಬಹುದು. ಇದು ಹಿಂದಿನಿಂದಲೂ ಸಂಭವಿಸುತ್ತಿದೆ' ಎಂದು ದೂರಿದರು.

ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲೂ ಎಲ್ಲ 30 ಸ್ಥಾನಗಳಲ್ಲಿ ಗೆಲುವು ದಾಖಲಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತಲ್ಲದೆ ಮಮತಾ ತಿರುಗೇಟು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.