ADVERTISEMENT

ಬಂಗಾಳದಲ್ಲಿ ಬಿಜೆಪಿಯನ್ನು ಸೋಲಿಸಲು ಎಡಪಂಥೀಯ ಮತ ಯಾಚಿಸಿದ ಮಮತಾ

ಪಿಟಿಐ
Published 18 ಮಾರ್ಚ್ 2021, 5:08 IST
Last Updated 18 ಮಾರ್ಚ್ 2021, 5:08 IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎಡಪಂಥೀಯರ ಮತಯಾಚನೆ ನಡೆಸಿದ್ದಾರೆ.

ಬಿಜೆಪಿಯನ್ನು ಸೋಲಿಸುವ ಸಲುವಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಮಮತಾ ಬ್ಯಾನರ್ಜಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ 'ಬಿಜೆಪಿಗೆ ಮತವಿಲ್ಲ' ಎಂಬ ಎಡ ಪಂಥೀಯರ ಅಭಿಯಾನವನ್ನು ಮಮತಾ ಬ್ಯಾನರ್ಜಿ ಸ್ವಾಗತಿಸಿದರು.

ADVERTISEMENT

ದಶಕಗಳಿಂದಲೂ ಅಧಿಕಾರದಲ್ಲಿದ್ದ ಎಡರಂಗ ಸರ್ಕಾರವನ್ನು ಸೋಲಿಸಿದ್ದ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಹೊಸ ರಾಜಕೀಯ ಕ್ರಾಂತಿ ಎಬ್ಬಿಸಿದ್ದರು. ಆದರೆ ಕಳೆದೊಂದು ದಶಕದಿಂದ ಅಧಿಕಾರದಲ್ಲಿರುವ ಮಮತಾಗೆ ಈ ಬಾರಿ ಬಿಜೆಪಿಯಿಂದ ಅತಿ ದೊಡ್ಡ ಸವಾಲು ಎದುರಾಗಿದೆ.

ರಾಜ್ಯದ ಹಿತದೃಷ್ಟಿಯಿಂದ ಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ಬರುವುದನ್ನು ತಡೆಯುವುದು ಅತ್ಯಗತ್ಯವಾಗಿದೆ. ಬಿಜೆಪಿಗೆ ಮತ ಚಲಾಯಿಸಲಾರೆ ಎಂಬ ಎಡಪಂಥೀಯ ಸ್ನೇಹಿತರ ನಿಲುವಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಎಡರಂಗ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲದ ಕಾರಣ, ಎಡಪಂಥೀಯರು ತಮ್ಮಪರವಾಗಿಯೇ ಮತ ಚಲಾಯಿಸಿ ಮತಗಳನ್ನು ವ್ಯರ್ಥ ಮಾಡಬಾರದು. ಇದರ ಬದಲು ಬಿಜೆಪಿಯನ್ನು ಸೋಲಿಸಲು ಎಡಪಂಥೀಯ ಬೆಂಬಲಿಗರು ಟಿಎಂಸಿ ಅಭ್ಯರ್ಥಿಗಳಿಗೆ ಮತ ಹಾಕಬೇಕು ಎಂದು ಮಮತಾ ಬ್ಯಾನರ್ಜಿ ವಿನಂತಿಸಿದರು.

ದುರದೃಷ್ಟವಶಾತ್ ಬಂಗಾಳವು ವಿಭಜಿತ ಮನೋಸ್ಥಿತಿಯನ್ನು ಹೊಂದಿರುವ ಮತ್ತು ಸಾಮರಸ್ಯರನ್ನು ಭಂಗಗೊಳಿಸಲು ಬಯಸುವ ಹೊರಗಿನವರ ಬೆದರಿಕೆಗೆ ಒಳಗಾಗಿದೆ. ಈ ಬೆದರಿಕೆಯನ್ನು ತೊಲಗಿಸುವುದು ಅನಿವಾರ್ಯವಾಗಿದೆ. ಬಂಗಾಳದ ಪ್ರತಿಯೊಬ್ಬ ಜನರ ಹಾಗೂ ಸಮುದಾಯದ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ನಾನು ಅವರೊಂದಿಗೆ ನಿಲ್ಲುತ್ತೇನೆ ಎಂಬ ಭರವಸೆ ನೀಡುತ್ತೇನೆ ಎಂದಿದ್ದಾರೆ.

ಬಂಗಾಳದ ಮಗಳಾಗಿರುವ ನಾನು ನನ್ನ ತಾಯ್ನಾಡಿಗೆ ನಾನು ಎಂದೆಂದಿಗೂ ಋಣಿಯಾಗಿರುತ್ತೇನೆ. ನನ್ನ ಇಡೀ ಜೀವನವನ್ನೇ ರಾಜ್ಯಕ್ಕಾಗಿ ಮುಡಿಪಾಗಿಟ್ಟಿದ್ದೇನೆ. ಬಿಜೆಪಿ 'ರಾಜಕೀಯ ವೈರಸ್' ಆಗಿದ್ದು, ರಾಜ್ಯದ ಒಗ್ಗಟ್ಟನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಈಗಾಗಲೇ ಹಲವಾರು ಟಿಎಂಸಿ ನಾಯಕರು ಬಹಿರಂಗವಾಗಿ ಎಡಪಂಥೀಯರ ಮತಯಾಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.