ಕೋಲ್ಕತ್ತ: ನೆರೆಯ ದೇಶ ಭೂತಾನ್‌ನಿಂದ ಹರಿದು ಬರುವ ನೀರಿನಿಂದ ಉತ್ತರ ಬಂಗಾಳದಲ್ಲಿ ಪ್ರವಾಹ ಉಂಟಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದರು. ಪರಿಹಾರ ನೀಡುವಂತೆಯೂ ಅವರು ಭೂತಾನ್‌ಗೆ ಕೋರಿದರು.
ಜಲಪೈಗುರಿ ಜಿಲ್ಲೆಯ ನಾಗರಕಟಕ್ಕೆ ಭೇಟಿ ನೀಡಿದ್ದ ಮಮತಾ ಅವರು ಸರ್ಕಾರದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಇಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳ ಮೇಲ್ವಿಚಾರಣೆ ನಡೆಸಿದ ಅವರು, ‘ಭೂತಾನ್‌ನ ಹಲವು ನದಿಗಳ ನೀರಿನೊಂದಿಗೆ ಮಳೆ ನೀರು ಹರಿದು ಬರುತ್ತಿದ್ದು, ಇದರಿಂದ ನಮಗೆ ನಷ್ಟ ಉಂಟಾಗಿದೆ. ಭೂತಾನ್ ನಮಗೆ ಪರಿಹಾರ ನೀಡಬೇಕು’ ಎಂದು ಹೇಳಿದರು.
‘ಇಂಡೋ– ಭೂತಾನ್ ಜಂಟಿ ನದಿ ಆಯೋಗ’ ರಚಿಸುವಂತೆ ಹಾಗೂ ಪಶ್ಚಿಮ ಬಂಗಾಳವನ್ನು ಅದರ ಭಾಗವನ್ನಾಗಿ ಮಾಡುವಂತೆ ನಾನು ಒತ್ತಾಯಿಸುತ್ತಿದ್ದೇನೆ. ನಮ್ಮ ಒತ್ತಾಯದ ಮೇರೆಗೆ ಅ.16ರಂದು ಸಭೆ ಆಯೋಜಿಸಲಾಗಿದೆ. ನಮ್ಮ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ’ ಎಂದರು.
ಅಲ್ಲದೇ ‘ವಿಪತ್ತು ನಿರ್ವಹಣೆಗಾಗಿ ಹಣಕಾಸಿನ ನೆರವು ನೀಡುವಲ್ಲಿ ಕೇಂದ್ರವು ನಮ್ಮ ರಾಜ್ಯಕ್ಕೆ ವಂಚನೆ ಮಾಡಿದೆ’ ಎಂದು ಆರೋಪಿಸಿದರು.
ಅ.4ರಂದು ಡಾರ್ಜಿಲಿಂಗ್ ಹಾಗೂ ಅದರ ಸುತ್ತಲಿನ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಯಿತು. ಪ್ರವಾಹದಿಂದ ಹೆಚ್ಚು ಹಾನಿಗೊಳಗಾಗಿರುವ ಪ್ರದೇಶಗಳಿಗೆ ಮಮತಾ ಭೇಟಿ ನೀಡಿದರು.
ಜಲಪೈಗುರಿ ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತದಿಂದಾಗಿ 32 ಮಂದಿ ಸಾವಿಗೀಡಾಗಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.