ADVERTISEMENT

ಪಶ್ಚಿಮ ಬಂಗಾಳ ವಿಧಾನಸಭೆಗೆ 5ನೇ ಹಂತದ ಮತದಾನ, 12 ರಾಜ್ಯಗಳಲ್ಲಿ ಉಪಚುನಾವಣೆ ಇಂದು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 1:48 IST
Last Updated 17 ಏಪ್ರಿಲ್ 2021, 1:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಗೆ ಐದನೇ ಹಂತದ ಮತದಾನವು ಶನಿವಾರ ನಡೆಯಲಿದೆ. ಒಟ್ಟು 45 ವಿಧಾನಸಭಾ ಕ್ಷೇತ್ರಗಳ 342 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಈ ಕ್ಷೇತ್ರಗಳಲ್ಲಿ ಸುಮಾರು ಒಂದು ಕೋಟಿ ಅರ್ಹ ಮತದಾರರಿದ್ದಾರೆ.

ಎಡಪಂಥೀಯ ಮುಖಂಡ, ಸಿಲಿಗುರಿಯ ಮೇಯರ್‌ ಅಶೋಕ್‌ ಭಟ್ಟಾಚಾರ್ಯ, ಸಚಿವರಾದ ಗೌತಮ್‌ದೇವ್‌ ಮತ್ತು ಬ್ರತ್ಯ ಬಸು ಹಾಗೂ ಬಿಜೆಪಿಯ ಸಮಿಕ್‌ ಭಟ್ಟಾಚಾರ್ಯ ಅವರು ಕಣದಲ್ಲಿರುವ ಪ್ರಮುಖರಾಗಿದ್ದಾರೆ.

ತೃಣಮೂಲ ಕಾಂಗ್ರೆಸ್‌ಗೆ ಈ ಹಂತವು ಅತ್ಯಂತ ಮಹತ್ವದ್ದಾಗಿದೆ. 2016ರ ಚುನಾವಣೆಯಲ್ಲಿ ಈ ಭಾಗದ 32 ಕ್ಷೇತ್ರಗಳನ್ನು ಟಿಎಂಸಿ ಮತ್ತು 10 ಸ್ಥಾನಗಳನ್ನು ಕಾಂಗ್ರೆಸ್‌– ಎಡಪಕ್ಷಗಳ ಮೈತ್ರಿ ಕೂಟವು ಗೆದ್ದುಕೊಂಡಿತ್ತು. ಈ ಬಾರಿ ಬಿಜೆಪಿಯು ಇಲ್ಲಿನ ಕೆಲವು ಕ್ಷೇತ್ರಗಳನ್ನು ಕಸಿದುಕೊಳ್ಳುವ ನಿರೀಕ್ಷೆಯಲ್ಲಿದೆ.

ADVERTISEMENT

‘ಹಿಂದಿನ ನಾಲ್ಕು ಹಂತದ ಮತದಾನದ ಸಂದರ್ಭಗಳಲ್ಲಿ ಅಲ್ಲಲ್ಲಿ ಗಲಭೆಗಳು ನಡೆದಿರುವುದರಿಂದ, ಐದನೇ ಹಂತದ ಮತದಾನಕ್ಕೆ ಒಳಗಾಗಲಿರುವ ಕ್ಷೇತ್ರಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಕೇಂದ್ರೀಯ ಭದ್ರತಾ ಪಡೆಗಳ 853 ತುಕಡಿಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮತದಾನದ ಸಂದರ್ಭದಲ್ಲಿ ಕೋವಿಡ್‌ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು’ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇನ್ನೂ ಮೂರು ಹಂತದ ಚುನಾವಣೆಗಳು ಬಾಕಿ ಇವೆ.

12 ರಾಜ್ಯಗಳಲ್ಲಿ ಉಪಚುನಾವಣೆ

ದೇಶದ 12 ರಾಜ್ಯಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಎರಡು ಲೋಕಸಭಾ ಕ್ಷೇತ್ರ ಹಾಗೂ 14 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಉಪಚುನಾವಣೆ ನಡೆಯಲಿದೆ.

ಆಂಧ್ರಪ್ರದೇಶದ ತಿರುಪತಿ ಹಾಗೂ ಕರ್ನಾಟಕದ ಬೆಳಗಾವಿ ಲೋಕಸಭಾ ಕ್ಷೇತ್ರಗಳು ಮತ್ತು ರಾಜಸ್ಥಾನ (3), ಕರ್ನಾಟಕ (2), ಗುಜರಾತ್‌, ಜಾರ್ಖಂಡ್‌, ಮಧ್ಯಪ್ರದೇಶ, ಮಹಾರಾಷ್ಟ್ರ, ಮಿಜೋರಾಂ, ನಾಗಾಲ್ಯಾಂಡ್‌, ಒಡಿಶಾ, ರಾಜಸ್ಥಾನ, ತೆಲಂಗಾಣ ಹಾಗೂ ಉತ್ತರಾಖಂಡದ (ತಲಾ 1) ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.