ADVERTISEMENT

ಪೌರತ್ವ ಕಾಯ್ದೆ ವಿರೋಧಿಸಿ ಮಮತಾ ರ್‍ಯಾಲಿ ಅಸಾಂವಿಧಾನಿಕ: ಪಶ್ಚಿಮ ಬಂಗಾಳ ರಾಜ್ಯಪಾಲ

ರ್‍ಯಾಲಿ ನಡೆಸದಂತೆ ಆಗ್ರಹ

ಏಜೆನ್ಸೀಸ್
Published 16 ಡಿಸೆಂಬರ್ 2019, 7:23 IST
Last Updated 16 ಡಿಸೆಂಬರ್ 2019, 7:23 IST
ಜಗದೀಪ್ ಧನ್‌ಕರ್ ಮತ್ತು ಮಮತಾ ಬ್ಯಾನರ್ಜಿ
ಜಗದೀಪ್ ಧನ್‌ಕರ್ ಮತ್ತು ಮಮತಾ ಬ್ಯಾನರ್ಜಿ   

ಕೋಲ್ಕತ್ತ:ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಮ್ಮಿಕೊಂಡಿರುವ ರ್‍ಯಾಲಿ ಅಸಾಂವಿಧಾನಿಕ ಎಂದು ಅಲ್ಲಿನ ರಾಜ್ಯಪಾಲ ಜಗದೀಪ್ ಧನ್‌ಕರ್ ಸೋಮವಾರ ಹೇಳಿದ್ದಾರೆ.

‘ಕೇಂದ್ರ ಸರ್ಕಾರದ ಅಸಾಂವಿಧಾನಿಕ ಕಾಯ್ದೆಗಳ ವಿರುದ್ಧ ಕೊಲ್ಕತ್ತದಲ್ಲಿ ಬೃಹತ್‌ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 1 ಗಂಟೆಗೆ ಕೆಂಪು ರಸ್ತೆಯಲ್ಲಿನ ಬಾಬಾಸಾಹೇಬ್‌ ಅಂಬೇಡ್ಕರ್‌ ಪ್ರತಿಮೆಯಿಂದ ರ್‍ಯಾಲಿ ಶುರುವಾಗಲಿದೆ’ ಎಂದು ಮಮತಾ ಬ್ಯಾನರ್ಜಿ ಬೆಳಿಗ್ಗೆ ಟ್ವೀಟ್‌ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ರಾಜ್ಯಪಾಲರು, ಮಮತಾ ಅವರ ಈ ನಡೆ ತೀವ್ರ ಸಿಟ್ಟು ಬರಿಸಿದೆ. ಮುಖ್ಯಮಂ‌ತ್ರಿಗಳು ರ್‍ಯಾಲಿ ರದ್ದುಪಡಿಸಬೇಕು. ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದ್ದು ಪರಿಸ್ಥಿತಿ ಶಾಂತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

‘ನಮ್ಮ ಸರ್ಕಾರವು ಎನ್‌ಆರ್‌ಸಿ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆ ಅನುಷ್ಠಾನಗೊಳಿಸುವುದಿಲ್ಲ’ ಎಂದು ಮಮತಾ ಸರ್ಕಾರವು ಪ್ರಕಟಿಸುತ್ತಿರುವ ಎಲ್ಲ ಜಾಹೀರಾತುಗಳನ್ನು ವಾಪಸ್ ಪಡೆಯಬೇಕು ಎಂದೂ ರಾಜ್ಯಪಾಲರು ಒತ್ತಾಯಿಸಿದ್ದಾರೆ.

ಈ ನೆಲದ ಕಾನೂನನ್ನು ಪ್ರಶ್ನಿಸಿ ಜಾಹೀರಾತು ನೀಡಲು ಸರ್ಕಾರದ ಬೊಕ್ಕಸದ ಹಣ ಬಳಸುತ್ತಿರುವುದು ಎಷ್ಟು ಸರಿ ಎಂದೂಧನ್‌ಕರ್ ಪ್ರಶ್ನಿಸಿದ್ದಾರೆ.

‘ಎನ್‌ಆರ್‌ಸಿ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆ ಅನುಷ್ಠಾನಗೊಳಿಸುವುದಿಲ್ಲ ಎಂದು ನೀಡಿದ್ದ ಜಾಹೀರಾತುಗಳನ್ನು ಹಿಂಪಡೆಯುವಂತೆ ಈ ಹಿಂದೆ ನಾನು ಮುಖ್ಯಮಂತ್ರಿಗಳಿಗೆ ಸೂಚಿಸಿದ್ದೆ. ಆದರೆ ಆ ಕುರಿತು ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಮತ್ತು ಪ್ರತಿಕ್ರಿಯೆ ನೀಡಿಲ್ಲ.ಈ ನೆಲದ ಕಾನೂನನ್ನು ಪ್ರಶ್ನಿಸಿ ಜಾಹೀರಾತು ನೀಡಲು ಸರ್ಕಾರದ ಬೊಕ್ಕಸದದಿಂದ ಹೆಚ್ಚು ಪ್ರಮಾಣದ ನಿಧಿ ಬಳಸುವುದು ಎಷ್ಟು ಸರಿ! ಇದು ಅಸಾಂವಿಧಾನಿಕ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಧನ್‌ಕರ್ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.