ADVERTISEMENT

ಸುವೇಂದುಗೆ ಬಂಧನದಿಂದ ಮಧ್ಯಂತರ ರಕ್ಷಣೆ ಪ್ರಶ್ನಿಸಿ ಕೋರ್ಟ್‌ಗೆ ಸರ್ಕಾರ ಮೇಲ್ಮನವಿ

ಐಎಎನ್ಎಸ್
Published 7 ಸೆಪ್ಟೆಂಬರ್ 2021, 12:42 IST
Last Updated 7 ಸೆಪ್ಟೆಂಬರ್ 2021, 12:42 IST
ಸುವೇಂದು ಅಧಿಕಾರಿ
ಸುವೇಂದು ಅಧಿಕಾರಿ   

ಕೋಲ್ಕತ್ತ: ಅಂಗರಕ್ಷಕ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸುವೇಂದು ಅಧಿಕಾರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿರುವುದನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರವು ಮಂಗಳವಾರ ಕಲ್ಕತ್ತಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

ಸುವೇಂದು ಅಧಿಕಾರಿಗೆ ಸೋಮವಾರ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ್ದ ಕಲ್ಕತ್ತಾ ಹೈಕೋರ್ಟ್‌ ಏಕಸದಸ್ಯ ಪೀಠವು ಐದು ಪ್ರಕರಣಗಳ ಪೈಕಿ ಮೂರರಲ್ಲಿ ಕ್ರಮ ಕೈಗೊಳ್ಳದಂತೆ ತಡೆಯಾಜ್ಞೆ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ ಎಂದು ಕಲ್ಕತ್ತಾ ಹೈಕೋರ್ಟ್ ವಕೀಲರೊಬ್ಬರು ತಿಳಿಸಿದ್ದಾರೆ.

ವಿಭಾಗೀಯ ಪೀಠವು ಬುಧವಾರ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.

ಸುವೇಂದು ಅವರ ಅಂಗರಕ್ಷಕರಾಗಿದ್ದ ಸುಭಬ್ರತಾ ಚಕ್ರವರ್ತಿ 2018ರಲ್ಲಿ ಸುವೇಂದು ಅವರ ಕಾಂತಿ ನಿವಾಸದಲ್ಲಿ ತಮ್ಮ ಸರ್ವಿಸ್‌ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿ ಅವರಿಗೆ ಸಿಐಡಿ ಸಮನ್ಸ್ ನೀಡಿತ್ತು. ಈ ಸಮನ್ಸ್‌ಗೆ ಸಂಬಂಧಿಸಿ ಸುವೇಂದು ವಿರುದ್ಧ ತಕ್ಷಣಕ್ಕೆ ಯಾವುದೇ ಕ್ರಮ ಕೈಗೊಳ್ಳಬಾರದು. ನ್ಯಾಯಾಲಯದ ಅನುಮತಿಯಿಲ್ಲದೆ ಅವರನ್ನು ಬಂಧಿಸಬಾರದು ಎಂದು ಹೈಕೋರ್ಟ್ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.