
‘ಬಾಂಗ್ಲಾದೇಶದ ಪ್ರಜೆಗಳಿಗೆ ವಾಸ್ತವ್ಯ ಹೂಡಲು ಅವಕಾಶವಿಲ್ಲ’ ಎಂಬ ಬರಹವನ್ನು ಪಶ್ಚಿಮ ಬಂಗಾಳದ ಸಿಲಿಗುರಿಯ ಹೋಟೆಲ್‌ವೊಂದರಲ್ಲಿ ಅಂಟಿಸಲಾಗಿತ್ತು
–ಪಿಟಿಐ ಚಿತ್ರ
ಕೋಲ್ಕತ್ತ: ನೆರೆಯ ಬಾಂಗ್ಲಾದೇಶದಲ್ಲಿ ರಾಜಕೀಯ ಪ್ರಕ್ಷುಬ್ಧತೆ ತಲೆದೋರಿರುವುದರಿಂದ ಸಿಲಿಗುರಿ ಸುತ್ತಮುತ್ತ ಬಾಂಗ್ಲಾ ಪ್ರಜೆಗಳಿಗೆ ವಸತಿ ಸೌಕರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಪಶ್ಚಿಮ ಬಂಗಾಳದ ಹೋಟೆಲ್ ಉದ್ಯಮಿಗಳ ಸಂಘ ನಿರ್ಧರಿಸಿದೆ.
‘ಭಾರತ–ಬಾಂಗ್ಲಾದೇಶದ ಸಂಬಂಧ ಹದಗೆಡಿಸುವಂತಹ ಘಟನೆಗಳು ಇತ್ತೀಚೆಗೆ ಸಂಭವಿಸಿವೆ. ಬಾಂಗ್ಲಾದೇಶದಲ್ಲಿ ಭಾರತದ ಧ್ವಜಕ್ಕೆ ಅಗೌರವ ತೋರಲಾಗಿದೆ. ಕೆಲವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಪ್ರವಾಸಿಗರು ಮತ್ತು ಹೋಟೆಲ್ ಸಿಬ್ಬಂದಿಯ ಸುರಕ್ಷತೆ, ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಗ್ರೇಟರ್ ಸಿಲಿಗುರಿ ಹೋಟೆಲ್ ಮಾಲೀಕರ ಕಲ್ಯಾಣ ಸಂಘ ತಿಳಿಸಿದೆ.
‘ಮುಂದಿನ ಆದೇಶ ಬರುವವರೆಗೂ ಸಂಘದ ಸದಸ್ಯರು ಬಾಂಗ್ಲಾ ಪ್ರಜೆಗಳಿಗೆ ಚೆಕ್–ಇನ್ ಮಾಡಲು ಅವಕಾಶ ನೀಡುವುದಿಲ್ಲ. ಸಿಲಿಗುರಿ ಮತ್ತು ಸುತ್ತಮುತ್ತ 180ಕ್ಕೂ ಹೆಚ್ಚಿನ ಹೋಟೆಲ್‌ಗಳು ಸಂಘದ ಸದಸ್ಯತ್ವ ಹೊಂದಿವೆ. ಸಂಘದ ಸದಸ್ಯರಲ್ಲದ 50 ಹೋಟೆಲ್‌ಗಳು ಸ್ವಯಂಪ್ರೇರಣೆಯಿಂದ ಈ ನಿರ್ಬಂಧವನ್ನು ಪಾಲಿಸಲು ಮುಂದಾಗಿವೆ’ ಎಂದು ಸಂಘದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತರ ಬಂಗಾಳದ ಅಂತರರಾಷ್ಟ್ರೀಯ ಗಡಿ ಮತ್ತು ಭಾರತದ ಮುಖ್ಯ ಭೂಭಾಗವನ್ನು ಈಶಾನ್ಯ ರಾಜ್ಯಗಳೊಂದಿಗೆ ಸಂಪರ್ಕಿಸುವ ಸಿಲಿಗುರಿ ಕಾರಿಡಾರ್, ಪ್ರವಾಸಿ, ವೈದ್ಯಕೀಯ ಮತ್ತು ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬರುವ ಬಾಂಗ್ಲಾ ಪ್ರಜೆಗಳಿಗೆ ಪ್ರಮುಖ ಪ್ರವೇಶ ಸ್ಥಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.