
ಎಸ್‌ಐಆರ್ ಪ್ರಕ್ರಿಯೆ
ಕೃಪೆ: ಪಿಟಿಐ
ಕೋಲ್ಕತ್ತ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತಂತೆ ಆತಂಕ ಹಾಗೂ ಅನಿಶ್ಚಿತತೆ ಎದುರಿಸುತ್ತಿರುವ ಸೋನಗಾಚಿ ಪ್ರದೇಶದ ಲೈಂಗಿಕ ಕಾರ್ಯಕರ್ತೆಯರಿಗಾಗಿ ವಿಶೇಷ ನೆರವು ಶಿಬಿರ ಆಯೋಜಿಸಲು ಚುನಾವಣಾ ಆಯೋಗ ಮುಂದಾಗಿದೆ.
ಏಷ್ಯಾದ ಅತಿದೊಡ್ಡ ರೆಡ್‌ಲೈಟ್ ಪ್ರದೇಶದಲ್ಲಿರುವ ಹೆಚ್ಚಿನ ಲೈಂಗಿಕ ಕಾರ್ಯಕರ್ತೆಯರು 2002ರಿಂದ ಈಚಿನ ದಾಖಲೆಗಳನ್ನು ಕಲೆಹಾಕಲು ಸಾಧ್ಯವಾಗುತ್ತಿಲ್ಲ ಎಂದು ಹಲವು ಸಂಘಟನೆಗಳು ಒತ್ತಿ ಹೇಳಿವೆ.
ಹೆತ್ತವರೊಂದಿಗೆ ಎಂದೂ ವಾಸಿಸದ, ಹುಟ್ಟಿದಾಗಲೇ ಅವರು ಬಿಟ್ಟು ಹೋದ ಅಥವಾ ದೂರವಾದ, ಕುಟುಂಬದ ಸಂಪರ್ಕ ಸಾಧಿಸಲು ಸಾದ್ಯವಾಗದ ಹಾಗೂ ಪೋಷಕರ ಗುರುತೇ ತಿಳಿದಿಲ್ಲದ ಸಾಕಷ್ಟು ಮಂದಿಗೆ ದಾಖಲೆಗಳನ್ನು ಹೊಂದಿಸುವುದು ಸವಾಲೇ ಸರಿ ಎಂದು ಪ್ರತಿಪಾದಿಸಿವೆ. ಇದರ ಬೆನ್ನಲ್ಲೇ, ಆಯೋಗ ಕ್ರಮಕ್ಕೆ ಮುಂದಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ತಿಳಿಸಿದ್ದಾರೆ.
'ಆ ಪ್ರದೇಶಗಳಲ್ಲಿರುವ ಲೈಂಗಿಕ ಕಾರ್ಯಕರ್ತೆಯರು ಅರ್ಜಿಗಳನ್ನು ಭರ್ತಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಅವರಿಗೆ ಅಗತ್ಯ ನೆರವು ಒದಗಿಸಲು ಸಿದ್ಧರಿದ್ದೇವೆ. ಹೆಚ್ಚಿನವರಿಗೆ 2002ರ ಮತದಾರರ ಪಟ್ಟಿಯೊಂದಿಗೆ ಯಾವುದೇ ಸಂಪರ್ಕ ಸಿಕ್ಕಿಲ್ಲ ಎಂಬುದು ತಿಳಿದುಬಂದಿದೆ. ಡಿಸೆಂಬರ್ 9ಕ್ಕೆ ಕರಡು ಪಟ್ಟಿ ಬಿಡುಗಡೆಯಾದ ನಂತರ, ಸಮಸ್ಯೆ ಇರುವವರೊಂದಿಗೆ ಚರ್ಚಿಸಲು, ಸ್ಥಳದಲ್ಲೇ ಇತ್ಯರ್ಥ ಪಡಿಸಲು ವಿಶೇಷ ಶಿಬಿರಗಳನ್ನು ಆಯೋಜಿಸಲು ನಿರ್ಧರಿಸಿದ್ದೇವೆ' ಎಂದು ಅಧಿಕಾರಿ ಹೇಳಿದ್ದಾರೆ.
ಸೋನಗಾಚಿಯಾದ್ಯಂತ ಸುಮಾರು 10,000 ಲೈಂಗಿಕ ಕಾರ್ಯಕರ್ತೆಯರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.