ADVERTISEMENT

ಆಸ್ಪತ್ರೆಯಲ್ಲಿರುವ ಮಮತಾ ಚಿತ್ರ ಹಂಚಿಕೊಂಡ ಅಳಿಯ ಅಭಿಷೇಕ್‌: ಬಿಜೆಪಿಗೆ ನೇರ ಸವಾಲು

ಏಜೆನ್ಸೀಸ್
Published 11 ಮಾರ್ಚ್ 2021, 6:25 IST
Last Updated 11 ಮಾರ್ಚ್ 2021, 6:25 IST
ಮಮತಾ ಬ್ಯಾನರ್ಜಿ- ಅಳಿಯ ಅಭಿಷೇಕ್ ಟ್ವಿಟರ್‌ನಲ್ಲಿ‌ ಹಂಚಿಕೊಂಡಿರುವ ಚಿತ್ರ
ಮಮತಾ ಬ್ಯಾನರ್ಜಿ- ಅಳಿಯ ಅಭಿಷೇಕ್ ಟ್ವಿಟರ್‌ನಲ್ಲಿ‌ ಹಂಚಿಕೊಂಡಿರುವ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಕೆಲ ಅಪರಿಚಿತರು ಮಮತಾ ಬ್ಯಾನರ್ಜಿ ಅವರನ್ನು ತಳ್ಳಿ ಗಾಯಗೊಳಿಸಿದ ಘಟನೆ ತೀವ್ರ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

ಕೋಲ್ಕತ್ತದಲ್ಲಿರುವ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಮಮತಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಪಾದ, ಬಲ ಭುಜ, ಕುತ್ತಿಗೆಗೆ ಗಾಯಗಳಾಗಿವೆ ಎಂದು ವೈದ್ಯರ ಮಾಹಿತಿ ನೀಡಿದ್ದಾರೆ. ಅವರ ಆರೋಗ್ಯದ ಮೇಲೆ ನಿಗಾ ಇರಿಸುವುದಕ್ಕಾಗಿ ಐವರು ತಜ್ಞ ವೈದ್ಯರ ಸಮಿತಿಯನ್ನು ರಚಿಸಲಾಗಿದೆ.

ಆಸ್ಪತ್ರೆಯಲ್ಲಿ ದಾಖಲಾಗಿರುವ ಮಮತಾರ ಚಿತ್ರವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ಅವರ ಅಳಿಯ ಹಾಗೂ ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಬಿಜೆಪಿಗೆ ನೇರ ಸವಾಲು ಹಾಕಿದ್ದಾರೆ.

ADVERTISEMENT

'ಪಶ್ಚಿಮ ಬಂಗಾಳ ಬಿಜೆಪಿ'ಯನ್ನು ಗುರಿಯಾಗಿಸಿ ಟ್ವೀಟ್‌ ಮಾಡಿರುವ ಅಭಿಷೇಕ್‌ ಬ್ಯಾನರ್ಜಿ, 'ಮೇ 2ರ ಭಾನುವಾರದಂದು ಬಂಗಾಳಿ ಜನರ ಶಕ್ತಿಯನ್ನು ಎದುರಿಸಲು ನೀವು ತಯಾರಾಗಿ' ಎಂದು ಗುಡುಗಿದ್ದಾರೆ.

'ಮಮತಾ ಅವರನ್ನು ತಡೆಯಲು ಹೇಡಿಗಳು ಯತ್ನಿಸಿದ್ದಾರೆ. ಆದರೆ, ಅದು ಅವರಿಗೆ ಸಾಧ್ಯವಾಗಿಲ್ಲ. ಮೊದಲು ಪಶ್ಚಿಮ ಬಂಗಾಳ ಎಡಿಜಿ, ನಂತರ ಡಿಜಿ ಅವರನ್ನು ತೆಗೆದುಹಾಕಲಾಯಿತು. ಈಗ ಈ ಘಟನೆ ನಡೆದಿದೆ. ಇದೆಲ್ಲವನ್ನೂ ನೋಡಿಕೊಂಡು ಚುನಾವಣಾ ಆಯೋಗ ಹೇಗೆ ಸುಮ್ಮನಿದೆ' ಎಂದು ಟಿಎಂಸಿ ನಾಯಕ ಪಾರ್ಥ ಚಟರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಲು ಟಿಎಂಸಿ ನಿರ್ಧರಿಸಿದೆ ಎಂದೂ ಪಾರ್ಥ ಚಟರ್ಜಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಾರ್ಚ್‌ 27ರಂದುವಿಧಾನಸಭೆ ಚುನಾವಣೆ ಆರಂಭವಾಗಲಿದ್ದು, 8 ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 29ಕ್ಕೆ ಮತದಾನ ಮುಕ್ತಾಯಗೊಳ್ಳಲಿದೆ. ಮೇ 2ರಂದು ಚುನಾವಣಾ ಫಲಿತಾಂಶ ಹೊರಬರಲಿದೆ.

ಮಮತಾ ಅವರು ಬುಧವಾರ ನಂದಿಗ್ರಾಮ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಒಂದು ಕಾಲದಲ್ಲಿ ಮಮತಾ ಅವರ ಆಪ್ತರಾಗಿದ್ದ ಸುವೇಂದು ಅಧಿಕಾರಿ ಇಲ್ಲಿನ ಬಿಜೆಪಿಯ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ನಂದಿಗ್ರಾಮ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಮಮತಾ ಅವರು ನಾಮಪತ್ರ ಸಲ್ಲಿಸಿದ ಬಳಿಕ ಈ ಘಟನೆ ನಡೆದಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಚುನಾವಣಾ ಆಯೋಗವು ಈ ಬಗ್ಗೆ ವರದಿ ಕೇಳಿದೆ.

'ಕೆಲವು ಅಪರಿಚಿತರು ತಮ್ಮನ್ನು ತಳ್ಳಿದ್ದೂ ಅಲ್ಲದೇ ಎಡಗಾಲಿಗೆ ಗಾಯ ಆಗುವಂತೆ ಕಾರಿನ ಬಾಗಿಲನ್ನು ಬಲವಾಗಿ ಮುಚ್ಚಿದ್ದಾರೆ' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.