ADVERTISEMENT

ಪಶ್ಚಿಮ ಬಂಗಾಳ | ಬಾರ್‌ಗಳಲ್ಲಿ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ: ಮಸೂದೆ ಅಂಗೀಕಾರ

ಪಿಟಿಐ
Published 20 ಮಾರ್ಚ್ 2025, 5:24 IST
Last Updated 20 ಮಾರ್ಚ್ 2025, 5:24 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಚಿತ್ರ ಕೃಪೆ: Pexels

ಕೋಲ್ಕತ್ತ: ಬಾರ್‌ಗಳಲ್ಲಿ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ನೀಡುವ ಮಸೂದೆಯನ್ನು ಪಶ್ಚಿಮ ಬಂಗಾಳ ವಿಧಾನಸಭೆಯು ಬುಧವಾರ ಅಂಗೀಕರಿಸಿದೆ.

ADVERTISEMENT

ಸಚಿವ ಚಂದ್ರಿಮಾ ಭಟ್ಟಾಚಾರ್ಯ, ಪಶ್ಚಿಮ ಬಂಗಾಳ ಹಣಕಾಸು ಮಸೂದೆ–2025 ಅನ್ನು ವಿಧಾನಸಭೆಯಲ್ಲಿ ಮಂಡಿಸಿದರು. ಈ ಮಸೂದೆಯು 1909ರ ಬಂಗಾಳ ಅಬಕಾರಿ ಕಾಯ್ದೆಯನ್ನು ತಿದ್ದುಪಡಿ ಮಾಡಿ, ‘ಆನ್‌’ ಕೆಟಗರಿ ಮದ್ಯದಂಗಡಿಗಳಲ್ಲಿ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ನೀಡುತ್ತದೆ.

‘ಆಫ್‌’ ಕೆಟಗರಿಯಲ್ಲಿ ಮದ್ಯವನ್ನು ಮಳಿಗೆಗಳಲ್ಲಿ ಮಾರಾಟ ಮಾಡಲು ಅವಕಾಶ ನೀಡಿದರೆ, ‘ಆನ್‌’ ಕೆಟಗರಿಯಲ್ಲಿ ಮದ್ಯದಂಗಡಿಯ ಆವರಣದಲ್ಲಿಯೇ ಮದ್ಯ ಸೇವಿಸಲು ಅನುಮತಿಸಲಾಗಿದೆ.

‌ಮಸೂದೆಯ ಮೇಲಿನ ಚರ್ಚೆಯನ್ನು ಮುಕ್ತಾಯಗೊಳಿಸಿ ಮಾತನಾಡಿದ ಭಟ್ಟಾಚಾರ್ಯ, ರಾಜ್ಯ ಸರ್ಕಾರವು ಪುರುಷರು ಮತ್ತು ಮಹಿಳೆಯರ ನಡುವಿನ ತಾರತಮ್ಯವನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಮಸೂದೆಯಲ್ಲಿರುವ ಇತರ ನಿಬಂಧನೆಗಳ ಜೊತೆಗೆ ಅಕ್ರಮ ಮದ್ಯ ತಯಾರಿಕೆಯನ್ನು ತಡೆಗಟ್ಟಲು ಬೆಲ್ಲ ಸೇರಿದಂತೆ ವಿವಿಧ ಕಚ್ಚಾ ವಸ್ತುಗಳ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಈ ಮಸೂದೆಯು 1944 ರ ಬಂಗಾಳ ಕೃಷಿ ಆದಾಯ ತೆರಿಗೆ ಕಾಯ್ದೆಯನ್ನು ತಿದ್ದುಪಡಿ ಮಾಡಿ, ಚಹಾ ಉದ್ಯಮಕ್ಕೆ, ವಿಶೇಷವಾಗಿ ಸಾಂಕ್ರಾಮಿಕ ರೋಗದಿಂದ ಸಂಕಷ್ಟ ಎದುರಿಸುತ್ತಿರುವ ಸಣ್ಣ ಚಹಾ ತೋಟಗಳಿಗೆ ತೆರಿಗೆ ವಿನಾಯಿತಿ ನೀಡುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.