ADVERTISEMENT

ಎಸ್‌ಐಆರ್‌: ಪಶ್ಚಿಮ ಬಂಗಾಳದಲ್ಲಿ ವಿಚಾರಣೆ ಆರಂಭ

ಪಿಟಿಐ
Published 27 ಡಿಸೆಂಬರ್ 2025, 16:01 IST
Last Updated 27 ಡಿಸೆಂಬರ್ 2025, 16:01 IST
ಕೋಲ್ಕತ್ತದಲ್ಲಿ ವಿಚಾರಣಾ ಕೇಂದ್ರದ ಜನರು ಶನಿವಾರ ಹಾಜರಾಗಿದ್ದರು –ಪಿಟಿಐ ಚಿತ್ರ
ಕೋಲ್ಕತ್ತದಲ್ಲಿ ವಿಚಾರಣಾ ಕೇಂದ್ರದ ಜನರು ಶನಿವಾರ ಹಾಜರಾಗಿದ್ದರು –ಪಿಟಿಐ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಭಾಗವಾಗಿ ರಾಜ್ಯದ ಹಲವು ಮತದಾರರು 3,234 ಕೇಂದ್ರಗಳ ಎದುರು ಶನಿವಾರ ವಿಚಾರಣೆಗೆ ಹಾಜರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪತ್ತೆಯಾಗದ 32 ಲಕ್ಷ ಮತದಾರರನ್ನು ಮೊದಲ ಹಂತದಲ್ಲಿ ವಿಚಾರಣೆಗೆ ಕರೆಯಲಾಗುತ್ತದೆ. ಬೆಳಿಗ್ಗೆ 11ರಿಂದ ಪ್ರಕ್ರಿಯೆ ಆರಂಭವಾಗಿದ್ದು, 4,500 ಮಂದಿ ಮೈಕ್ರೊ ಅಬ್‌ಸರ್ವರ್‌ಗಳು ವಿಚಾರಣೆ ನಡೆಸಿದರು ಎಂದು ಹೇಳಿದರು.

ಮತದಾರರು ಆಧಾರ್‌ ಸೇರಿದಂತೆ ಗುರುತಿಸಲಾದ 12 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತಮ್ಮ ಗುರುತು ಮತ್ತು ವಿಳಾಸದ ಸಾಕ್ಷ್ಯವಾಗಿ ಸಲ್ಲಿಕೆ ಮಾಡಬಹುದು ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದರು. 

ADVERTISEMENT

85 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯೋಮಾನದವರು ದೈಹಿಕವಾಗಿ ವಿಚಾರಣೆಗೆ ಹಾಜರಾಗುವ ಅಗತ್ಯವಿಲ್ಲ. ಆಯೋಗದ ಅಧಿಕಾರಿಗಳು ಅವರ ನಿವಾಸಕ್ಕೇ ತೆರಳಿ ಮಾಹಿತಿಯನ್ನು ‍ಪಡೆಯಲಿದ್ದಾರೆ ಎಂದರು.

‘4,500 ಮೈಕ್ರೊ ಅಬ್‌ಸರ್ವರ್‌ಗಳ ಮೇಲ್ವಿಚಾರಣೆಯಲ್ಲಿ ವಿಚಾರಣಾ ಪ್ರಕ್ರಿಯೆ ನಡೆಯುತ್ತಿದೆ. ಮತದಾರರ ನೋಂದಣಿ ಅಧಿಕಾರಿ (ಇಆರ್‌ಒ) ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ ಮಾತ್ರ ವಿಚಾರಣಾ ಕೇಂದ್ರದೊಳಗೆ ಪ್ರವೇಶ ನೀಡಲಾಗುತ್ತಿದೆ. ಪ್ರತಿ ಕೇಂದ್ರದ ಎದುರು ದೊಡ್ಡ ಸಂಖ್ಯೆಯ ಜನರು ಸರದಿಯಲ್ಲಿ ನಿಂತಿದ್ದಾರೆ’ ಎಂದು ರಾಜ್ಯ ಚುನಾವಣಾ ಆಯೋಗದ ಕಚೇರಿಯು ತಿಳಿಸಿದೆ.

ಚುನಾವಣಾ ಆಯೋಗವು ರಾಜ್ಯದ ಮತದಾರರ ಕರಡು ಪಟ್ಟಿಯನ್ನು ಡಿಸೆಂಬರ್‌ 16ರಂದು ಪ್ರಕಟಿಸಿದೆ. 58 ಲಕ್ಷ ಮತದಾರರ ಹೆಸರನ್ನು ಅದು ಪಟ್ಟಿಯಿಂದ ಅಳಿಸಿಹಾಕಿದೆ.

Cut-off box - ಕೇರಳ: ನೆರವು ಕೇಂದ್ರ ಸ್ಥಾಪನೆಗೆ ಸೂಚನೆ ತಿರುವನಂತಪುರ: ಎಸ್‌ಐಆರ್‌ ಭಾಗವಾಗಿ ಪ್ರಕಟಿಸಿರುವ ಮತದಾರರ ಕರಡು ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರನ್ನು ಪಟ್ಟಿಗೆ ಸೇರ್ಪಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಕೇರಳ ಸರ್ಕಾರ ನಿರ್ದೇಶನ ನೀಡಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಇರಲೇಬೇಕು. ಒಬ್ಬರೇ ಒಬ್ಬರು ಅರ್ಹ ಮತದಾರರ ಹೆಸರೂ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಸರ್ಕಾರ ಆದೇಶಿಸಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ನೆರವು ಕೇಂದ್ರವನ್ನು ಸ್ಥಾಪಿಸಬೇಕು. ಗ್ರಾಮ ಕಚೇರಿಗಳಲ್ಲಿಯೇ ನೆರವು ಕೇಂದ್ರವನ್ನು ಸ್ಥಾಪಿಸಬೇಕು. ಅಲ್ಲಿ ಅಗತ್ಯ ಸೌಲಭ್ಯ ಇಲ್ಲದಿದ್ದಲ್ಲಿ ಸಮೀಪದಲ್ಲಿಯೇ ಸ್ಥಾಪಿಸಬೇಕು ಎಂದು ತಿಳಿಸಿದೆ. 

Cut-off box - ಸರ್ಕಾರಿ ಅಧಿಕಾರಿಗಳ ಸಂಘದಿಂದ ಆಕ್ಷೇಪ ಕೋಲ್ಕತ್ತ: ಎಸ್‌ಐಆರ್‌ ಭಾಗವಾಗಿ ಕರಡು ಪಟ್ಟಿಯಲ್ಲಿ ಮತದಾರರ ಹೆಸರನ್ನು ಕೈಬಿಟ್ಟಿರುವುದಕ್ಕೆ ಪಶ್ಚಿಮ ಬಂಗಾಳದ ಸರ್ಕಾರಿ ಅಧಿಕಾರಿಗಳ ಸಂಘವು ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ನೋಂದಣಿ ಅಧಿಕಾರಿಯ (ಇಆರ್‌ಒ) ಶಾಸನಬದ್ಧ ಅಧಿಕಾರವನ್ನು ಮೀರಿ ಕಂಪ್ಯೂಟರ್‌ ಆಧರಿತ ವ್ಯವಸ್ಥೆಯ ಮೂಲಕ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಅದು ಆರೋಪಿಸಿದೆ. ನಮೂನೆ ಅರ್ಜಿಯನ್ನು ವಾಪಸ್‌ ನೀಡದ ನಿರ್ದಿಷ್ಟ ಸಂಖ್ಯೆಯ ಮತದಾರರನ್ನು ಕರಡು ಪಟ್ಟಿಯಿಂದ ಹೊರಗಿಡಲಾಗಿದೆ. ಸಾವು ಶಾಶ್ವತ ವಲಸೆ ಗೈರು ಸೇರಿದಂತೆ ವಿವಿಧ ಕಾರಣಗಳಿಗಾಗಿ ಮತದಾರರ ಹೆಸರನ್ನು ಕೈಬಿಟ್ಟಿದೆ ಎಂದು ಸಂಘವು ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.