
ಕೋಲ್ಕತ್ತ : ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಮುಂದಿನ ಹಂತಕ್ಕೆ ಕಾಲಿಟ್ಟಿದ್ದು, ಅಹವಾಲು ಆಲಿಕೆಗಾಗಿ ನೋಟಿಸ್ ನೀಡುವ ಕೆಲಸ ಗುರುವಾರ ಆರಂಭವಾಗಿದೆ.
ಮತದಾರರ ನೋಂದಣಿ ಅಧಿಕಾರಿಗಳು (ಇಆರ್‌ಒ) ಆರಂಭಿಕ ಹಂತದಲ್ಲಿ 32 ಲಕ್ಷ ಮತದಾರರಿಗೆ ನೋಟಿಸ್ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರಡು ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಈ 32 ಲಕ್ಷ ಮತದಾರರ ವಿವರಗಳನ್ನು 2002ರ ಎಸ್‌ಐಆರ್‌ನ ದತ್ತಾಂಶದೊಂದಿಗೆ ತಾಳೆ ಹಾಕಲು ಸಾಧ್ಯವಾಗಿಲ್ಲ. ಆದ್ದರಿಂದ ಅವರ ದಾಖಲೆಗಳನ್ನು ಆಯೋಗ ಪರಿಶೀಲಿಸಲಿದೆ.
‘ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲ್ಪಟ್ಟ ಕೂಡಲೇ ಅಂತಹ ಮತದಾರರನ್ನು ದಾಖಲೆಗಳ ಪರಿಶೀಲನೆಗೆ ಆಯೋಗವು ಕರೆಯುವುದಿಲ್ಲ ಎಂದರ್ಥವಲ್ಲ. ಆದರೂ, ಅಂತಹ ಮತದಾರರ ಅಹವಾಲು ಆಲಿಕೆ ಪ್ರಕ್ರಿಯೆ ಸರಳವಾಗಿರಬಹುದು. ಇಆರ್‌ಒಗಳು ಡಿಸೆಂಬರ್ 18ರ ಬೆಳಿಗ್ಗೆಯಿಂದ ನೋಟಿಸ್ ನೀಡುವ ಪ್ರಕ್ರಿಯೆ ಆರಂಭಿಸಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ನೋಟಿಸ್‌ನ ಎರಡು ಪ್ರತಿಗಳನ್ನು ನೀಡಲಾಗುತ್ತದೆ. ಒಂದು ಪ್ರತಿಯನ್ನು ಸಂಬಂಧಪಟ್ಟ ಮತದಾರರಿಗೆ ಹಸ್ತಾಂತರಿಸಲಾಗುತ್ತದೆ. ಇನ್ನೊಂದು ಪ್ರತಿಯನ್ನು ಮತಗಟ್ಟೆ ಅಧಿಕಾರಿಯು ಮತದಾರರ ಸಹಿಯನ್ನು ಪಡೆದು ತಮ್ಮ ಬಳಿಯೇ ಇಟ್ಟುಕೊಳ್ಳುವರು. ನೋಟಿಸ್ ಪಡೆದ ನಂತರ ಮತದಾರರಿಗೆ ಅಧಿಕಾರಿಗಳ ಮುಂದೆ ಹಾಜರಾಗಲು ಅಲ್ಪ ಸಮಯಾವಕಾಶ ನೀಡಲಾಗುವುದು’ ಎಂದಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ ಮತ್ತು ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳ ಕಚೇರಿಗಳು ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಅಹವಾಲು ಆಲಿಕೆ ನಡೆಸಲಾಗುವುದು ಎಂದು ಹೇಳಿದ್ದಾರೆ.
‘ಚುನಾವಣಾ ಆಯೋಗವು ತಿಳಿಸಿರುವ 11 ದಾಖಲೆಗಳನ್ನು ಪರಿಶೀಲನೆಗಾಗಿ ಸಿದ್ಧವಾಗಿಡುವಂತೆ ಅಧಿಕಾರಿಗಳು ಮತದಾರರಿಗೆ ಸಲಹೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.