ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯದಲ್ಲಿ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದರೂ ಸಿಬಿಐ ರಾಜ್ಯದಲ್ಲಿ ತನಿಖೆ ನಡೆಸುತ್ತಿದೆ ಎಂಬ ರಾಜ್ಯ ಸರ್ಕಾರದ ಆರೋಪಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ‘ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ರಾಜಕೀಯ ವಿಷಯಗಳ ಬಗ್ಗೆ ವಾಗ್ವಾದ ನಡೆಸಲು ಅವಕಾಶ ನೀಡುವುದಿಲ್ಲ’ ಎಂದು ಬುಧವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನು ಒಳಗೊಂಡ ನ್ಯಾಯಪೀಠವು, ಕೋರ್ಟ್ ಕಾನೂನಾತ್ಮಕ ವಿಚಾರಗಳನ್ನು ಮಾತ್ರ ನಿರ್ಧರಿಸುತ್ತದೆ. ಇಲ್ಲಿ ರಾಜಕೀಯ ವಾಗ್ವಾದಕ್ಕೆ ಅವಕಾಶ ಇಲ್ಲ ಎಂದು ಹೇಳಿತು.
ರಾಜ್ಯ ಸರ್ಕಾರದ ಅರ್ಜಿಯು ವಿಚಾರಣೆಗೆ ಅರ್ಹವೇ ಅಥವಾ ಇಲ್ಲವೇ ಎಂಬ ಕುರಿತ ತೀರ್ಪನ್ನು ಕೋರ್ಟ್ ಕಾಯ್ದಿರಿಸಿತು.
ರಾಜ್ಯ ಸರ್ಕಾರದ ಪರ ವಕೀಲ ಕಪಿಲ್ ಸಿಬಲ್, ‘ರಾಜ್ಯದಲ್ಲಿ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರವು 2018ರ ನವೆಂಬರ್ 16ರಂದು ಹಿಂಪಡೆದಿದೆ. ಹೀಗಿರುವಾಗ ಸಿಬಿಐ ರಾಜ್ಯವನ್ನು ಪ್ರವೇಶಿಸಿ ತನಿಖೆ ನಡೆಸಲು ಕೇಂದ್ರ ಸರ್ಕಾರ ಅವಕಾಶ ನೀಡುವಂತಿಲ್ಲ’ ಎಂದು ಹೇಳಿದರು.
ಇದಕ್ಕೆ ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಸಿಬಿಐ ಮೇಲೆ ಕೇಂದ್ರ ಸರ್ಕಾರ ಅಥವಾ ಅದರ ಇಲಾಖೆಗಳು ನಿಯಂತ್ರಣ ಹೊಂದಿಲ್ಲ’ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.