ADVERTISEMENT

‘ಗ್ರೇಟಾ’ ಹಂಚಿಕೊಂಡ ಟೂಲ್ ಕಿಟ್‌ನಲ್ಲೇನಿದೆ? ವಿವಾದವಾಗಿದ್ದೇಕೆ? ಇಲ್ಲಿದೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 7:44 IST
Last Updated 5 ಫೆಬ್ರುವರಿ 2021, 7:44 IST
ಗ್ರೇಟಾ ಥನ್‌ಬರ್ಗ್
ಗ್ರೇಟಾ ಥನ್‌ಬರ್ಗ್   

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಅಂತರರಾಷ್ಟ್ರೀಯ ವಲಯದಿಂದಲೂ ಪ್ರತಿಭಟನೆಗೆ ಬೆಂಬಲ ವ್ಯಕ್ತವಾಗುತ್ತಿದೆ. ಅದರಲ್ಲೂ ಪರಿಸರ ಕಾರ್ಯಕರ್ತೆ ಗ್ರೇಟಾಥನ್‌ಬರ್ಗ್ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದ ರೈತರ ಪ್ರತಿಭಟನೆಗೆ ಬೆಂಬಲಿಸುವುದು ಹೇಗೆ? ಎಂಬ ಮಾಹಿತಿ ಇದೆ ಎನ್ನಲಾದ ಟೂಲ್ ಕಿಟ್ ಬಗ್ಗೆ ಭಾರೀ ಆಕ್ರೋಶ ಕೇಳಿಬರುತ್ತಿದೆ.

‘ಗ್ರೇಟಾ’ ಹಂಚಿಕೊಂಡ ಟೂಲ್ ಕಿಟ್‌ನಲ್ಲಿ ಏನಿದೆ?

ಭಾರತದ ರೈತರ ಜತೆ ಚರ್ಚೆ ನಡೆಸದೇ ನೂತನ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಇವು ರೈತರನ್ನು ಕಾರ್ಪೊರೇಟ್‌ ಕಂಪನಿಗಳ ನಿಯಂತ್ರಣಕ್ಕೆ ಸಿಲುಕಿಸುತ್ತವೆ. ಇವುಗಳ ವಿರುದ್ಧ ಹೋರಾಡುತ್ತಿರುವ ರೈತರಿಗೆ ಬೆಂಬಲ ಸೂಚಿಸಿ. ಅವರ ಹೋರಾಟದಲ್ಲಿ ಭಾಗಿಯಾಗಿ ಎಂದು ಟೂಲ್‌ಕಿಟ್‌ನಲ್ಲಿ ಹೇಳಲಾಗಿದೆ. ಕ್ರಿಪ್ಟೋಪ್ಯಾಡ್‌ನಲ್ಲಿ ಈ ಟೂಲ್‌ಕಿಟ್ ಇದೆ. ಇದನ್ನು ಯಾರು ಸಿದ್ಧಪಡಿಸಿದ್ದಾರೆ, ಅಪ್‌ಲೋಡ್ ಮಾಡಿದ್ದಾರೆ ಎಂಬುದರ ಮಾಹಿತಿ ಇನ್ನೂ ಸಿಕ್ಕಿಲ್ಲ.

ADVERTISEMENT

ಭಾರತದ ರೈತರ ಜತೆ ಚರ್ಚೆ ನಡೆಸದೇ ನೂತನ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಇವು ರೈತರನ್ನು ಕಾರ್ಪೊರೇಟ್‌ ಕಂಪನಿಗಳ ನಿಯಂತ್ರಣಕ್ಕೆ ಸಿಲುಕಿಸುತ್ತವೆ. ಇವುಗಳ ವಿರುದ್ಧ ಹೋರಾಡುತ್ತಿರುವ ರೈತರಿಗೆ ಬೆಂಬಲ ಸೂಚಿಸಿ. ಅವರ ಹೋರಾಟದಲ್ಲಿ ಭಾಗಿಯಾಗಿ ಎಂದು ಟೂಲ್‌ಕಿಟ್‌ನಲ್ಲಿ ಹೇಳಲಾಗಿದೆ. ಕ್ರಿಪ್ಟೋಪ್ಯಾಡ್‌ನಲ್ಲಿ ಈ ಟೂಲ್‌ಕಿಟ್ ಇದೆ. ಇದನ್ನು ಯಾರು ಸಿದ್ಧಪಡಿಸಿದ್ದಾರೆ, ಅಪ್‌ಲೋಡ್ ಮಾಡಿದ್ದಾರೆ ಎಂಬುದರ ಮಾಹಿತಿ ಇನ್ನೂ ಸಿಕ್ಕಿಲ್ಲ.

ರೈತರ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಪ್ರತಿಭಟನೆ ನಡೆಸಿ ಎಂದು ಈ ಟೂಲ್‌ಕಿಟ್‌ನಲ್ಲಿ ಕರೆ ನೀಡಲಾಗಿದೆ. ಫೆಬ್ರುವರಿ 13/14ರಂದು ಡಿಜಿಟಲ್ ಸ್ಟ್ರೈಕ್‌ ನಡೆಸಿ. ಸಾಮಾಜಿಕ ಜಾಲತಾಣಗಳಲ್ಲಿ #FarmersProtest #StandWithFarmers ಹ್ಯಾಶ್‌ಟ್ಯಾಗ್ ಬಳಸಿ, ಪೋಸ್ಟ್‌ ಮಾಡಿ. ಭಾರತದ ರಾಯಭಾರ ಕಚೇರಿಗಳ ಎದುರು ಪ್ರತಿಭಟನೆ ನಡೆಸಿ. ಫೆಬ್ರುವರಿ 13/14ಕ್ಕೂ ಮೊದಲೂ ಪ್ರತಿಭಟನೆ ನಡೆಸಿ. #AskIndiaWhy ಹ್ಯಾಶ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡಿ. ಟ್ವೀಟ್‌ನಲ್ಲಿ ಭಾರತದ ಪ್ರಧಾನಿ ಮತ್ತು ಕೃಷಿ ಸಚಿವರನ್ನು ಟ್ಯಾಗ್ ಮಾಡಿ ಎಂದು ಈ ಟೂಲ್‌ಕಿಟ್‌ನಲ್ಲಿ ಕರೆ ನೀಡಲಾಗಿದೆ.

ಜನವರಿ 23 ಮತ್ತು 26ರ ಪ್ರತಿಭಟನೆಯ ವಿಚಾರ ಟೂಲ್‌ಕಿಟ್‌ನಲ್ಲಿ ಇದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಆ ಮಾಹಿತಿ ಟೂಲ್‌ಕಿಟ್‌ನಲ್ಲಿ ಇಲ್ಲ.

ಪೊಲೀಸರ ಸ್ಪಷ್ಟನೆ:

ಗ್ರೇಟಾ ಅವರು ಹಂಚಿಕೊಂಡಿದ್ದ ಟೂಲ್‌ಕಿಟ್‌ನಲ್ಲಿ, ದೇಶದಲ್ಲಿ ಸಾಮಾಜಿಕ ಸೌಹಾರ್ದತೆಯನ್ನು ಹಾಳುಮಾಡುವ ಕಾರ್ಯಯೋಜನೆಯು ಒಳಗೊಂಡಿದೆ. ಜನವರಿ 26 ಮತ್ತು 23ರಂದು ಡಿಜಿಟಲ್ ಸ್ಟ್ರೈಕ್‌ ನಡೆಸುವ ಕಾರ್ಯಯೋಜನೆಯನ್ನು ಈ ಟೂಲ್‌ಕಿಟ್ ವಿವರಿಸಿದೆ. ಹೀಗಾಗಿ ಇದನ್ನು ಬರೆದ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಸಂಚು ರೂಪಿಸಿದ ಮತ್ತು ದೇಶದ್ರೋಹ ಎಸಗಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಖಾಲಿಸ್ತಾನ ಪರ ಸಂಘಟನೆಯು ಈ ಟೂಲ್‌ಕಿಟ್‌ ಅನ್ನು ಸಿದ್ಧಪಡಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿರುವುದಾಗಿ ದೆಹಲಿ ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ರಂಜನ್ ಮಾಹಿತಿ ನೀಡಿದ್ದಾರೆ.

ವಿವಾದ ಏಕೆ?
ಕೃಷಿ ಕಾಯ್ದೆ ಜಾರಿಮಾಡುವುದು ಮತ್ತು ಅದರ ಬಗ್ಗೆ ಚರ್ಚೆ ನಡೆಸುವುದು ದೇಶದ ಆಂತರಿಕ ವಿಷಯವಾಗಿದ್ದು, ಇದರ ನೆಪದಲ್ಲಿ ಸಾಮಾಜಿಕ ಶಾಂತಿ ಕದಡಲು ಟೂಲ್ ಕಿಟ್ ಬಳಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿವಾದವಾಗಿದೆ. ಅದರಲ್ಲೂ ಈ ಟೂಲ್‌ಕಿಟ್ ಹಿಂದೆ ಖಾಲಿಸ್ತಾನ್ ನಂಟಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಹೋರಾಟದ ಹೆಸರಲ್ಲಿ ದೇಶ ವಿರೋಧಿ ಶಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ನಡೆಸುತ್ತಿವೆ ಎಂಬ ಆರೋಪವೂ ಕೇಳಿ ಬಂದಿದೆ. ಹಾಗಾಗಿ, ಅನಾಮಧೇಯನ ವಿರುದ್ಧ ಎಫ್ಐಆರ್ ದಾಖಲಿಸಿರುವ ದೆಹಲಿ ಪೊಲೀಸರು ಟೂಲ್ ಕಿಟ್ ಅಪ್ಲೋಡ್ ಮಾಡಿದವರು ಯಾರು? ಇದರ ಉದ್ದೇಶವೇನು? ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ವಿವಾದದ ಬೆನ್ನಲ್ಲೇ ರೈತರ ಹೋರಾಟಕ್ಕೆ ನನ್ನ ಬೆಂಬಲ ಈಗಲೂ ಇದೆ. ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸುಸುವುದಾಗಿ ಗ್ರೇಟಾ ಥನ್‌ಬರ್ಗ್‌ ಮತ್ತೆ ಟ್ವೀಟ್ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.