ADVERTISEMENT

ಮಹಾರಾಷ್ಟ್ರದ ಜನರು ಬಯಸಿದ್ದು ಆಗುತ್ತೆ: ಉದ್ಧವ್‌ ಠಾಕ್ರೆ

ಪಿಟಿಐ
Published 6 ಜೂನ್ 2025, 14:37 IST
Last Updated 6 ಜೂನ್ 2025, 14:37 IST
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ   

ಮುಂಬೈ: ‘ಮಹಾರಾಷ್ಟ್ರದ ಜನರು ಏನು ಬಯಸಿದ್ದಾರೋ ಅದು ಆಗುತ್ತದೆ’ ಎಂದು ಶಿವಸೇನೆ (ಯುಬಿಟಿ) ವರಿಷ್ಠ ಉದ್ಧವ್‌ ಠಾಕ್ರೆ ಶುಕ್ರವಾರ ಇಲ್ಲಿ ಹೇಳಿದರು.

ಸೋದರ ಸಂಬಂಧಿ ರಾಜ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್‌) ಜೊತೆಗೆ ಮೈತ್ರಿಯ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲೇ ಠಾಕ್ರೆ ಈ ಹೇಳಿಕೆ ನೀಡಿದರು.

‘ಮೈತ್ರಿಯ ಕುರಿತಂತೆ ಎರಡೂ ಪಕ್ಷಗಳ ಕಾರ್ಯಕರ್ತರ ಮನಸ್ಸಿನಲ್ಲಿ ಯಾವುದೇ ಗೊಂದಲವಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಸೋದರ ಸಂಬಂಧಿಗಳಿಬ್ಬರು ಮೈತ್ರಿಗೆ ಸಂಬಂಧಿಸಿದಂತೆ ಈಚೆಗೆ ಹೇಳಿಕೆ ನೀಡಿದ್ದು, ಎರಡು ದಶಕಗಳ ಹಿಂದಿನ ಕಹಿಯನ್ನು ಮರೆತು ಒಂದಾಗಬಹುದು ಎನ್ನಲಾಗುತ್ತಿದೆ.

‘ಮರಾಠಿ ಭಾಷಿಕರ ಹಿತಾಸಕ್ತಿಗಾಗಿ ಒಗ್ಗೂಡುವುದು ಕಷ್ಟವೇನಲ್ಲ’ ಎಂದು ರಾಜ್‌ ಹೇಳಿದ್ದರೆ, ‘ಮಹಾರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವವರನ್ನು ಪ್ರೋತ್ಸಾಹಿಸದಿದ್ದರೆ, ಕ್ಷುಲ್ಲಕ ವಿಚಾರಗಳನ್ನು ಬದಿಗಿಡಲು ಸಿದ್ಧ’ ಎಂದು ಉದ್ಧವ್‌ ಹೇಳಿದ್ದರು.

ಮೈತ್ರಿಯ ಸಾಧ್ಯತೆಯನ್ನು ಗುರುವಾರ ತಳ್ಳಿಹಾಕಿದ್ದ ಎಂಎನ್‌ಎಸ್‌ ನಾಯಕ ಅಮಿತ್‌ ಠಾಕ್ರೆ, ರಾಜ್‌ ಠಾಕ್ರೆ ಮತ್ತು ಉದ್ಧವ್‌ ಠಾಕ್ರೆ ಪರಸ್ಪರ ಮಾತನಾಡಿದರೆ ಮಾತ್ರ ಮೈತ್ರಿ ಏರ್ಪಡಬಹುದು ಎಂದಿದ್ದರು.

‘ಮಹಾರಾಷ್ಟ್ರದ ಹಿತಾಸಕ್ತಿ ರಕ್ಷಿಸಲು ಯಾರಾದರೂ ನಮ್ಮೊಡನೆ ಒಗ್ಗೂಡಲು ಮುಂದಾದರೆ ಅವರನ್ನು ನಮ್ಮೊಟ್ಟಿಗೆ ಕರೆದೊಯ್ಯುತ್ತೇವೆ’ ಎಂದು ಇದಕ್ಕೂ ಮುನ್ನ ಆದಿತ್ಯ ಠಾಕ್ರೆ ಹೇಳಿದ್ದರು.

ಮೈತ್ರಿಗೆ ಸ್ವಾಗತ:
ಕಾಂಗ್ರೆಸ್‌ ಕೋಮುವಾದಿ ಬಿಜೆಪಿಯನ್ನು ದೂರವಿಡಲು ಹಾಗೂ ಮಹಾರಾಷ್ಟ್ರದ ಹಿತಾಸಕ್ತಿ ರಕ್ಷಣೆಗಾಗಿ ಶಿವಸೇನೆ (ಯುಬಿಟಿ) ಮತ್ತು ಎಂಎನ್‌ಎಸ್‌ ನಡುವಿನ ಮೈತ್ರಿಯನ್ನು ಸ್ವಾಗತಿಸುವುದಾಗಿ ಎಂದು ಕಾಂಗ್ರೆಸ್‌ ಹೇಳಿದೆ. ಮೈತ್ರಿಗೆ ಉದ್ಧವ್‌ ಠಾಕ್ರೆ ಹಾಗೂ ರಾಜ್‌ ಠಾಕ್ರೆ ಒಲವು ತೋರಿದ್ದಾರೆ ಎಂಬ ವರದಿಗಳ ಕುರಿತು ಕಾಂಗ್ರೆಸ್‌ನ ರಾಜ್ಯ ವಕ್ತಾರ ಅತುಲ್‌ ಲೋಂಡೆ ಪ್ರತಿಕ್ರಿಯಿಸಿದ್ದಾರೆ. ‘ಅಧಿಕಾರದಲ್ಲಿರುವವರು ಜಾತಿ ಮತ್ತು ಕೋಮು ವಿಭಜನೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು ಶಾಹು ಮಹಾರಾಜರು ಮಹಾತ್ಮ ಫುಲೆ ಹಾಗೂ ಅಂಬೇಡ್ಕರ್‌ ಅವರ ಆಶಯ ಸಿದ್ಧಾಂತವನ್ನು ದಿನವೂ ಹೊಸಕಿ ಹಾಕುತ್ತಿದ್ದಾರೆ. ಇದರ ರಕ್ಷಣೆಗಾಗಿ ಕಾಂಗ್ರೆಸ್‌ ಮೈತ್ರಿಯನ್ನು ಸ್ವಾಗತಿಸಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.