ADVERTISEMENT

ಅತ್ಯಾಚಾರ ಪ್ರಕರಣ ರದ್ದುಪಡಿಸಿದ ದೆಹಲಿ ಹೈಕೋರ್ಟ್

ಪಿಟಿಐ
Published 6 ಏಪ್ರಿಲ್ 2024, 15:45 IST
Last Updated 6 ಏಪ್ರಿಲ್ 2024, 15:45 IST
   

ನವದೆಹಲಿ: ಮಹಿಳೆಯು ಪರಿಣಾಮಗಳ ಬಗ್ಗೆ ಆಲೋಚಿಸಿ ದೈಹಿಕ ಸಂಪರ್ಕ ಹೊಂದಿದ್ದಾಗ, ಪುರುಷನು ಮದುವೆ ಆಗುವುದಾಗಿ ಸುಳ್ಳು ಭರವಸೆ ನೀಡಿದ್ದ ಎಂದು ಹೇಳುವುದಕ್ಕೆ ಸ್ಪಷ್ಟವಾದ ಆಧಾರಗಳು ಇಲ್ಲದಿದ್ದಾಗ, ತಪ್ಪುಗ್ರಹಿಕೆಯ ಆಧಾರದಲ್ಲಿ ಆಕೆ ‘ಸಮ್ಮತಿ’ ಸೂಚಿಸಿದ್ದಳು ಎನ್ನಲಾಗದು ಎಂಬ ಮಾತನ್ನು ದೆಹಲಿ ಹೈಕೋರ್ಟ್ ಹೇಳಿದೆ.

ಪುರಷನೊಬ್ಬನ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸುವ ಸಂದರ್ಭದಲ್ಲಿ, ಪುರುಷ ಮತ್ತು ಮಹಿಳೆಯ ನಡುವೆ ಪ್ರಕರಣವು ಸೌಹಾರ್ದಯುತವಾಗಿ ಬಗೆಹರಿದಿದೆ. ಅವರಿಬ್ಬರೂ ಈಗ ಮದುವೆ ಆಗಿದ್ದಾರೆ ಎಂಬುದನ್ನು ದಾಖಲಿಸಿಕೊಂಡ ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂದೀರತ್ತಾ ಅವರು ಈ ಮಾತು ಹೇಳಿದ್ದಾರೆ. 

‘ಮಹಿಳೆಯು ಪರಿಣಾಮಗಳನ್ನು ಪೂರ್ತಿಯಾಗಿ ಅರ್ಥ ಮಾಡಿಕೊಂಡು, ಸಕಾರಣಗಳೊಂದಿಗೆ ದೈಹಿಕ ಸಂಪರ್ಕಕ್ಕೆ ಮುಂದಾಗಿದ್ದ ಸಂದರ್ಭಗಳಲ್ಲಿ, ಭರವಸೆ ನೀಡಿದ್ದ ವ್ಯಕ್ತಿಯು ಭರವಸೆಯನ್ನು ಈಡೇರಿಸುವ ಉದ್ದೇಶವನ್ನು ಹೊಂದಿರಲೇ ಇಲ್ಲ ಎಂಬುದನ್ನು ಸಾಬೀತುಪಡಿಸಲು ಬಹಳ ಸ್ಪಷ್ಟವಾದ ಆಧಾರಗಳು ಇಲ್ಲದೆ ಇದ್ದರೆ, ವಾಸ್ತವ ಸಂಗತಿಗಳನ್ನು ಮಹಿಳೆಯು ತಪ್ಪಾಗಿ ಗ್ರಹಿಸಿ ಸಮ್ಮತಿ ನೀಡಿದ್ದಳು ಎಂದು ಹೇಳಲಾಗದು’ ಎಂದು ನ್ಯಾಯಮೂರ್ತಿ ವಿವರಿಸಿದ್ದಾರೆ.

ADVERTISEMENT

‘ಮಹಿಳೆಯೊಬ್ಬಳು ಪುರುಷನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಆತ ಮದುವೆ ಆಗುವುದಾಗಿ ಹೇಳಿ ತನ್ನ ಜೊತೆ ಮತ್ತೆ ಮತ್ತೆ ದೈಹಿಕ ಸಂಪರ್ಕ ಸಾಧಿಸಿದ್ದ. ಆದರೆ ನಂತರದಲ್ಲಿ ಮದುವೆ ಆಗಲು ನಿರಾಕರಿಸಿದ. ತನ್ನ ಕುಟುಂಬದವರು ಬೇರೊಬ್ಬಳ ಜೊತೆ ಮದುವೆ ನಿಶ್ಚಯ ಮಾಡಿದ್ದಾರೆ ಎಂದು ಹೇಳಿದ’ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಳು.

ಆದರೆ, ತಕರಾರನ್ನು ದೂರುದಾರ ಮಹಿಳೆ ಹಾಗೂ ಪುರುಷ ಇತ್ಯರ್ಥಪಡಿಸಿಕೊಂಡಿದ್ದಾರೆ. ಅವರು ಕೋರ್ಟ್‌ನಲ್ಲಿ ವಿವಾಹ ಆಗಿದ್ದಾರೆ ಎಂಬುದನ್ನು ನಂತರದಲ್ಲಿ ನ್ಯಾಯಾಲಯಕ್ಕೆ ತಿಳಿಸಲಾಯಿತು. 

ತಾನು ಆ ಪುರುಷನ ಜೊತೆ ಸಂತೋಷದಿಂದ ಬಾಳ್ವೆ ನಡೆಸುತ್ತಿರುವುದಾಗಿ ಮಹಿಳೆಯು ಹೈಕೋರ್ಟ್‌ಗೆ ತಿಳಿಸಿದ್ದಳು. ಅಲ್ಲದೆ, ಪುರುಷನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲು ತಾನು ಬಯಸುವುದಿಲ್ಲ ಎಂದು ಹೇಳಿದಳು. ಪುರುಷನು ಮೊದಲು ಕುಟುಂಬದ ಒತ್ತಡದ ಕಾರಣದಿಂದಾಗಿ ವಿವಾಹ ಆಗಲು ಹಿಂದೇಟು ಹಾಕುತ್ತಿದ್ದುದಕ್ಕಾಗಿ ‘ತಪ್ಪುಗ್ರಹಿಕೆ’ಯಿಂದಾಗಿ ಎಫ್‌ಐಆರ್‌ ದಾಖಲಿಸಲಾಗಿತ್ತು ಎಂದೂ ತಿಳಿಸಿದರು.

‘ಮಹಿಳೆ ಹಾಗೂ ಪುರುಷನ ನಡುವಿನ ಸಂಬಂಧದ ಸ್ವರೂಪವನ್ನು ಪರಿಗಣಿಸಿದಾಗ, ಪುರುಷ ನೀಡಿದ್ದ ಭರವಸೆಯು ಮೋಸ ಎಸಗುವ ಉದ್ದೇಶ ಹೊಂದಿರಲಿಲ್ಲ, ಕೆಟ್ಟ ಉದ್ದೇಶವನ್ನು ಹೊಂದಿರಲಿಲ್ಲ; ಬದಲಿಗೆ, ಕುಟುಂಬದಲ್ಲಿನ ಕೆಲವು ಬೆಳವಣಿಗೆಗಳ ಕಾರಣದಿಂದಾಗಿ ಆ ರೀತಿ ಆಯಿತು ಎಂದು ಅನ್ನಿಸುತ್ತದೆ’ ಎಂದು ಹೈಕೋರ್ಟ್ ಹೇಳಿದೆ.

ತನಿಖೆ ನಡೆಯುತ್ತಿದ್ದ ಸಂದರ್ಭದಲ್ಲಿ ಪುರುಷನು ಸ್ವಇಚ್ಛೆಯಿಂದ ಈಕೆಯನ್ನು ಮದುವೆ ಆಗಿದ್ದಾನೆ. ಹೀಗಾಗಿ, ಆತ ಮೊದಲು ಮಾತು ಕೊಟ್ಟಿದ್ದು, ಅದನ್ನು ಮೀರುವ ಉದ್ದೇಶದಿಂದ ಎಂದು ಹೇಳಲು ಸಾಧ್ಯವಿಲ್ಲ. ತನಿಖೆಯನ್ನು ರದ್ದುಪಡಿಸುವುದರಿಂದ ಅವರಿಬ್ಬರ ನಡುವಿನ ವೈವಾಹಿಕ ಸಂಬಂಧವು ಉತ್ತಮವಾಗುತ್ತದೆ ಎಂಬುದನ್ನು ಕಡೆಗಣಿಸಲು ಸಾಧ್ಯವಿಲ್ಲ. ಮಹಿಳೆ ಮತ್ತು ಪುರುಷ ರಾಜಿ ಮಾಡಿಕೊಂಡಿರುವ ಕಾರಣ, ಆರೋಪಿಗೆ ಶಿಕ್ಷೆ ಆಗುವ ಸಾಧ್ಯತೆ ಕಡಿಮೆ ಎಂದು ಹೈಕೋರ್ಟ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.