
ದೆಹಲಿ ಸ್ಫೋಟ ನಡೆದ ಸ್ಥಳ
ಪಿಟಿಐ ಚಿತ್ರ
ಶ್ರೀನಗರ: ’ವೈಟ್ ಕಾಲರ್ ಟೆರರ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಿಚಾರಣೆಗೆ ಕರೆದಿದ್ದ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅನಂತನಾಗ್ ಜಿಲ್ಲೆಯ ಖಾಜಿಗುಂದ್ ಬಳಿಯ ಒಣ ಹಣ್ಣು ವ್ಯಾಪಾರಿ ಬಿಲಾಲ್ ಅಹ್ಮದ್ ವಾನಿ ಹಾಗೂ ಅವರ ಮಗ ಜಸೀರ್ ಬಿಲಾಲ್‌ನನ್ನು ನಿನ್ನೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮನೆಯಿಂದ ವಶಕ್ಕೆ ಪಡೆದುಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು.
ಈ ವೇಳೆ ಪೊಲೀಸರು ವಾನಿ ಮಗ ಜಸೀರ್‌ನನ್ನು ಮಾತ್ರ ಇಟ್ಟುಕೊಂಡು ಬಿಲಾಲ್‌ರನ್ನು ಪೊಲೀಸರು ವಾಪಸ್ ಮನೆಗೆ ಕಳುಹಿಸಿದ್ದರು. ಅವರು ನಿನ್ನೆ ಸಂಜೆ ಮನೆಯಲ್ಲಿ ಪೆಟ್ರೊಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ವಿಷಯ ತಿಳಿದು ಪೊಲೀಸರು ಅವರನ್ನು ಅನಂತ್‌ನಾಗ್‌ನ ಎಸ್‌ಎಂಎಸ್‌ಎಚ್ ಆಸ್ಪತ್ರೆಗೆ ದಾಖಲಿಸಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಒಣ ಹಣ್ಣು ವ್ಯಾಪಾರಿ ಬಿಲಾಲ್ ಅಹ್ಮದ್ ವಾನಿ ಚಿಕಿತ್ಸೆ ಫಲಿಸದೇ ಇಂದು ಬೆಳಿಗ್ಗೆ ಮೃತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಸಹರಾನ್‌ಪುರದಲ್ಲಿ ಬಂಧನಕ್ಕೆ ಒಳಗಾಗಿರುವ ವೈದ್ಯ ಡಾ. ಅದೀಲ್ ರಾಥರ್ ಅಣ್ಣ ಡಾ. ಮುಜಾಪ್ಫರ್ ರಾಥರ್ ದೆಹಲಿ ಸ್ಫೋಟದ ಮಾಸ್ಟರ್ ಮೈಂಡ್ ಎನ್ನಲಾಗಿದೆ. ಸದ್ಯ ಈತ ಅಪ್ಗಾನಿಸ್ತಾನದಲ್ಲಿ ಇದ್ದಾನೆ ಎನ್ನಲಾಗಿದೆ. ಈ ಮುಜಾಪ್ಫರ್ ಮನೆಯ ಪಕ್ಕದಲ್ಲಿಯೇ ಒಣ ಹಣ್ಣು ವ್ಯಾಪಾರಿ ಬಿಲಾಲ್ ಅಹ್ಮದ್ ವಾನಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.