ಒಡಿಶಾ: ಎರಡು ಮರಿಗಳಿಗೆ ಜನ್ಮ ನೀಡಿದ ಮೌಸಮಿ ಬಿಳಿ ಹುಲಿ
ಭುವನೇಶ್ವರ: ಒಡಿಶಾದ ನಂದನಕಾನನ ಜೈವಿಕ ಉದ್ಯಾನದಲ್ಲಿ ‘ಮೌಸಮಿ’ ಎಂಬ ಬಿಳಿಹುಲಿ ಎರಡು ಮರಿಗಳಿಗೆ ಜನ್ಮ ನೀಡಿದೆ.
ಶನಿವಾರ ರಾತ್ರಿ 9 ಗಂಟೆಯಿಂದ 11 ಗಂಟೆಯ ಅವಧಿಯಲ್ಲಿ ‘ಮೌಸಮಿ’ ಮರಿಗಳಿಗೆ ಜನ್ಮ ನೀಡಿದೆ. ಒಂದು ಹುಲಿ ಮರಿ ಸಹಜ ಬಣ್ಣದ್ದಾದರೆ, ಇನ್ನೊಂದು ಮರಿ ತಾಯಿಯಂತೆ ಬಿಳಿ ಬಣ್ಣವನ್ನು ಹೊಂದಿದೆ ಎಂದು ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.
ತಾಯಿ ಹುಲಿ ಹಾಗೂ ಮರಿಗಳು ಆರೋಗ್ಯವಾಗಿರುವಂತೆ ಕಂಡು ಬಂದಿವೆ. 24 ತಾಸೂ ಅವುಗಳ ಮೇಲೆ ಉದ್ಯಾನದ ಸಿಬ್ಬಂದಿ ನಿಗಾವಹಿಸಿದ್ದಾರೆ. ಕೆಲ ದಿನಗಳ ನಂತರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಮರಿಗಳು ಇನ್ನೂ ತಾಯಿಯೊಂದಿಗೆ ಅಂಟಿಕೊಂಡಿರುವುದರಿಂದ ಅವುಗಳ ಲಿಂಗ ತಿಳಿದು ಬಂದಿಲ್ಲ ಎಂದು ತಿಳಿಸಿದ್ದಾರೆ.
ಪಾರ್ಕ್‌ನ ‘ರಾಜೇಶ್’ ಎಂಬ ಸಹಜ ಬಣ್ಣದ ಹುಲಿ ಹಾಗೂ ‘ಮೌಸಮಿ’ ಮಿಲನದಿಂದ ಮರಿಗಳು ಜನಿಸಿವೆ ಎಂದು ಅವರು ಹೇಳಿದ್ದಾರೆ
ಇದರೊಂದಿಗೆ ನಂದನಕಾನನ ಬಯೊಲಾಜಿಕಲ್ ಪಾರ್ಕ್‌ನಲ್ಲಿ ಹುಲಿಗಳ ಸಂಖ್ಯೆ 29ಕ್ಕೆ ಹೆಚ್ಚಳವಾಗಿದೆ. ಇದರಲ್ಲಿ 17 ಗಂಡು ಹುಲಿ ಹಾಗೂ 10 ಹೆಣ್ಣು ಹುಲಿ ಇವೆ. ಜೊತೆಗೆ ಎರಡು ಹುಲಿಮರಿಗಳಿವೆ. 19 ಹುಲಿಗಳು ಸಹಜ ಬಣ್ಣವನ್ನು ಹೊಂದಿದ್ದರೆ, 6 ಬಿಳಿಹುಲಿ ಇವೆ. ನಾಲ್ಕು ಕಪ್ಪುಬಣ್ಣದ ಹುಲಿಗಳಿವೆ ಎಂದು ವಿವರಿಸಿದ್ದಾರೆ.
‘ರಾಜೇಶ್’–‘ಮೌಸಮಿ’ ನಂದನಕಾನನ ಬಯೊಲಾಜಿಕಲ್ ಪಾರ್ಕ್‌ನಲ್ಲಿಯೇ ಜನ್ಮತಳಿದಿದ್ದವು. ‘ಮೌಸಮಿ‘ಗೆ ಇದು ಎರಡನೇ ಹೆರಿಗೆ. ಬಿಳಿಹುಲಿಗಳೂ ಸಾಮಾನ್ಯ ಹುಲಿಗಳಂತೆ ಇರುತ್ತವೆ. ಆದರೆ ಚರ್ಮದ ಬಣ್ಣದ ವ್ಯತ್ಯಾಸದಿಂದ ಮೇಲ್ಮೈ ಬಣ್ಣ ಬದಲಾಗಿರುತ್ತದೆ.
ಒಡಿಶಾದ ನಂದನಕಾನನ ಜೈವಿಕ ಉದ್ಯಾನ ರಾಜಧಾನಿ ಭುವನೇಶ್ವರದಿಂದ ಉತ್ತರಕ್ಕೆ 10 ಕಿ.ಮಿ ದೂರದಲ್ಲಿದೆ. 470 ಹೆಕ್ಟರ್‌ನಲ್ಲಿ ಚಾಚಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.