ADVERTISEMENT

Delhi CM: ದೆಹಲಿ ಸಿಎಂ ಆಗಿ ಆಯ್ಕೆಯಾದ ರೇಖಾ ಗುಪ್ತಾ ಯಾರು? ಅವರ ಹಿನ್ನೆಲೆ ಏನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2025, 3:24 IST
Last Updated 20 ಫೆಬ್ರುವರಿ 2025, 3:24 IST
<div class="paragraphs"><p> ರೇಖಾ ಗುಪ್ತಾ.</p></div>

ರೇಖಾ ಗುಪ್ತಾ.

   

ಚಿತ್ರಕೃಪೆ: X/@gupta_rekha

ನವದೆಹಲಿ: ಶಾಲಿಮಾರ್ ಬಾಗ್ ಕ್ಷೇತ್ರದ ಶಾಸಕಿ ರೇಖಾ ಗುಪ್ತಾ ಅವರು ದೆಹಲಿಯ 32 ವರ್ಷಗಳ ವಿಧಾನಸಭಾ ಇತಿಹಾಸದಲ್ಲಿ ಮುಖ್ಯಮಂತ್ರಿಯಾಗುತ್ತಿರುವ ನಾಲ್ಕನೇ ಮಹಿಳೆ.

ADVERTISEMENT

ಗುರುವಾರ ಬೆಳಗ್ಗೆ ದೆಹಲಿ ಮುಖ್ಯಮಂತ್ರಿಯಾಗಿ ಅವರು ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

50 ವರ್ಷದ ರೇಖಾ ಗುಪ್ತಾ ದೆಹಲಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕಿಯಾಗಿ ಬುಧವಾರ ರಾತ್ರಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಸುಷ್ಮಾ ಸ್ವರಾಜ್‌, ಕಾಂಗ್ರೆಸ್‌ನ ಶೀಲಾ ದೀಕ್ಷಿತ್‌ ಹಾಗೂ ಎಎಪಿಯ ಆತಿಶಿ ಅವರು ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದರು.

ರೇಖಾ ಗುಪ್ತಾ ಯಾರು? ಅವರ ಹಿನ್ನೆಲೆ ಏನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ...

ರೇಖಾ ಗುಪ್ತಾ ಮೂಲತಹ ಹರಿಯಾಣ ರಾಜ್ಯದವರು. ಇವರು 1974ರಲ್ಲಿ ಹರಿಯಾಣದ ಜಿಂದ್ ಜಿಲ್ಲೆಯ ನಂದಗಢ ಎನ್ನುವ ಪುಟ್ಟ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದರು. ರೇಖಾ ಅವರಿಗೆ 2 ವರ್ಷ ತುಂಬಿದಾಗ ಅವರ ಕುಟುಂಬ ದೆಹಲಿಗೆ ಸ್ಥಳಾಂತರಗೊಂಡಿತು.

ರೇಖಾ ಗುಪ್ತಾ  ಅವರು, ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಕಾಲೇಜು ಶಿಕ್ಷಣವನ್ನು ದೆಹಲಿಯಲ್ಲಿಯೇ ಪೂರೈಸಿದರು. ಇವರು ಕಾನೂನು ಪದವಿ ಪಡೆದು, ವೃತ್ತಿಯಲ್ಲಿ ವಕೀಲೆಯಾಗಿದ್ದಾರೆ.

ರಾಜಕೀಯ ಜೀವನ...

ರೇಖಾ ಗುಪ್ತಾ ವಿದ್ಯಾರ್ಥಿಯಾಗಿದ್ದಾಗಲೇ ಅವರು ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ)ನ ಸಕ್ರಿಯ ಕಾರ್ಯಕರ್ತೆಯಾಗಿದ್ದರು. ಹಾಗೇ ಇವರು ಆರ್‌ಎಸ್‌ಎಸ್‌ನಲ್ಲೂ ಗುರುತಿಸಿಕೊಂಡಿದ್ದ ಅವರು ಸಂಘದ ಕಾರ್ಯಾಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು.

1992ರಲ್ಲಿ ದೆಹಲಿ ವಿಶ್ವವಿದ್ಯಾಲಯದ ದೌಲತ್ ರಾಮ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ಎಬಿವಿಪಿ ಮೂಲಕ ಹೋರಾಟದ ಹಾದಿ ತುಳಿದರು. 1996ರಿಂದ 97ರ ಅವಧಿಯಲ್ಲಿ ಅವರು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿದ್ದರು.

ರೇಖಾ ಅವರು 30 ವರ್ಷಗಳಿಂದ ಬಿಜೆಪಿಯಲ್ಲಿದ್ದಾರೆ. ಸಾಮಾನ್ಯ ಕಾರ್ಯಕರ್ತೆಯಾಗಿ ರಾಜಕೀಯ ಜೀವನ ಆರಂಭಿಸಿದ ಅವರು ಇಂದು ಮುಖ್ಯಮಂತ್ರಿ ಸ್ಥಾನ ಪಡೆಯುವವರೆಗೂ ಬೆಳೆದಿದ್ದಾರೆ.

2007ರಲ್ಲಿ ದೆಹಲಿ ಪಾಲಿಕೆಯ ಸದಸ್ಯೆಯಾಗಿ ಆಯ್ಕೆಯಾಗುವ ಮೂಲಕ ಸಾರ್ವಜನಿಕ ಜೀವನಕ್ಕೆ ಪ್ರವೇಶ ಮಾಡಿದರು. ಆ ನಂತರ ಅವರು ಮೂರು ಸಲ ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾದರು. ಇದರ ಜೊತೆಗೆ ಪಕ್ಷದ ಸಂಘಟನೆಯಲ್ಲೂ ಅವರು ಸಕ್ರಿಯರಾಗಿದ್ದರು.

ರೇಖಾ ಅವರು ದೆಹಲಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿದ್ದಾರೆ.

ವಿಶೇಷವೆಂದರೆ, ರೇಖಾ ಗುಪ್ತಾ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಶಾಲಿಮಾರ್ ಬಾಗ್ ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿರುವ ರೇಖಾ ಗುಪ್ತಾ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ವಂದನಾ ಕುಮಾರಿ ಅವರನ್ನು 29,595 ಮತಗಳ ಭಾರೀ ಅಂತರದಿಂದ ಸೋಲಿಸಿದ್ದಾರೆ.

ದೇಶದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳಾ ಮುಖ್ಯಮಂತ್ರಿಗಳಿಲ್ಲ. ಈ ಕೊರತೆಯನ್ನು ನೀಗಿಸಲು ಅಚ್ಚರಿ ಆಯ್ಕೆ ರೂಪದಲ್ಲಿ ರೇಖಾ ಅವರನ್ನು ದೆಹಲಿಯ ನೂತನ ಸಾರಥಿಯಾಗಿ ಬಿಜೆಪಿ ಆಯ್ಕೆ ಮಾಡಿದೆ.

ಬಿಜೆಪಿ ಹೈಕಮಾಂಡ್‌ ಕೂಡ ದೆಹಲಿಯಲ್ಲಿ ಮಹಿಳೆಗೆ ಪ್ರಾತಿನಿಧ್ಯ ನೀಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.