ರಂಜನಿ ಶ್ರೀನಿವಾಸನ್
ಚಿತ್ರ ಕೃಪೆ: ಎಕ್ಸ್ ಮಾಧ್ಯಮ
ನವದೆಹಲಿ: ಹಮಾಸ್ ಸಂಘಟನೆ ಬೆಂಬಲಿಸಿದ್ದಕ್ಕಾಗಿ ಅಮೆರಿಕದಿಂದ ಸ್ವಯಂ ಗಡೀಪಾರಾಗಿರುವ ಭಾರತೀಯ ವಿದ್ಯಾರ್ಥಿನಿ ರಂಜನಿ ಶ್ರೀನಿವಾಸನ್ ಯಾರು ಎಂಬ ಚರ್ಚೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿವೆ.
ರಂಜನಿ ಶ್ರೀನಿವಾಸನ್ ಎಫ್-1 ವಿದ್ಯಾರ್ಥಿ ಕಲಿಕಾ ವೀಸಾದಲ್ಲಿ ಅಮೆರಿಕಕ್ಕೆ ತೆರಳಿದ್ದರು. ಕೊಲಂಬಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದ ಆಕೆ ಭಯೋತ್ಪಾದಕ ಸಂಘಟನೆ ಹಮಾಸ್ ಬೆಂಬಲಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಹೇಳಿತ್ತು. ಇದರಿಂದ ಮಾರ್ಚ್ 5ರಂದು ಆಕೆಯ ವೀಸಾವನ್ನು ಅಮೆರಿಕ ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಅವರು ಮಾರ್ಚ್ 11ರಂದು ಸ್ವಯಂ ಗಡೀಪಾರಾಗಿದ್ದರು.
ಕೊಲಂಬಿಯಾ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಅವರ ವಿವರ ಲಭ್ಯವಾಗಿದೆ.
ಭಾರತದ ನಗರಗಳಲ್ಲಿ ಭೂಕಾರ್ಮಿಕರ ವಿಕಸನ ಸ್ವರೂಪಗಳ ಕುರಿತು ಅಧ್ಯಯನ ಮಾಡುತ್ತಿದ್ದರು. ಈ ಸಂಶೋಧನೆಗಾಗಿ ಅವರು ಲಕ್ಷ್ಮಿ ಮಿತ್ತಲ್ ದಕ್ಷಿಣಾ ಏಷ್ಯಾ ಶಿಕ್ಷಣ ಸಂಸ್ಥೆಯಿಂದ ಹಣಕಾಸು ನೆರವು ಪಡೆಯುತ್ತಿದ್ದರು.
ಅಹಮದಬಾದ್‌ನ ಪರಿಸರ ಯೋಜನೆ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ನಗರ ಯೋಜನೆ ವಿಷಯದಲ್ಲಿ ರಂಜನಿ ಪದವಿ ಪಡೆದಿದ್ದಾರೆ. ಹಾವರ್ಡ್ ವಿಶ್ವವಿದ್ಯಾಲಯಲ್ಲಿ ಪರಿಸರ ಮತ್ತು ನಗರ ಯೋಜನೆಗಳ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.
ಸ್ನಾತಕೋತ್ತರ ಪದವಿಯ ಬಳಿಕ ಅಮೆರಿಕಕ್ಕೆ ತೆರಳಿದ್ದ ಅವರು ಹವಾಮಾನ ಬದಲಾವಣೆಯಿಂದ ಅಪಾಯಕ್ಕೆ ಒಳಗಾಗಿರುವ ತಳ ಸಮುದಾಯಗಳ ಕುರಿತಾದ ಯೋಜನೆಯೊಂದರಲ್ಲಿ ಕೆಲವು ತಿಂಗಳು ಕೆಲಸ ಮಾಡಿದ್ದರು. ನಂತರ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಸಂಶೋಧನೆಗೆ ತೆರಳಿದ್ದರು.
ರಾಜಕೀಯ, ಆರ್ಥಿಕತೆ, ಜಾತಿ ಅಸಮಾನತೆ ಹಾಗೂ ಸಮಾಜಶಾಸ್ತ್ರ ವಿಷಯಗಳಲ್ಲಿ ರಂಜನಿ ಶ್ರೀನಿವಾಸ್ ಆಸಕ್ತಿ ಹೊಂದಿದ್ದಾರೆ ಎಂದು ಕೊಲಂಬಿಯಾ ವಿಶ್ವವಿದ್ಯಾಲಯದ ವೆಬ್‌ಸೈಟ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.