ADVERTISEMENT

ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಯಾರು ಬಯಸುತ್ತಾರೆ: ಕೆಟಿಆರ್‌ ವ್ಯಂಗ್ಯ

ಐಎಎನ್ಎಸ್
Published 7 ಮೇ 2022, 14:12 IST
Last Updated 7 ಮೇ 2022, 14:12 IST
ಕೆಟಿಆರ್‌ ಮತ್ತು ರಾಹುಲ್‌ ಗಾಂಧಿ
ಕೆಟಿಆರ್‌ ಮತ್ತು ರಾಹುಲ್‌ ಗಾಂಧಿ    

ಹೈದರಾಬಾದ್‌: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಜೊತೆ ಕಾಂಗ್ರೆಸ್ ಮೈತ್ರಿ ಇಲ್ಲ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಪಕ್ಷದ ಕಾರ್ಯಾಧ್ಯಕ್ಷ, ಸಚಿವ ಕೆ.ಟಿ.ರಾಮರಾವ್ (ಕೆಟಿಆರ್‌) ಶನಿವಾರ ತೀವ್ರ ಲೇವಡಿ ಮಾಡಿದ್ದಾರೆ.

'ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಬಯಸುವ ಯಾವುದಾದರು ರಾಜಕೀಯ ಪಕ್ಷ ಭಾರತದಲ್ಲಿ ಇದೆಯೇ?’ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರ ಮಗನೂ ಆದ ಕೆಟಿಆರ್‌ ಪ್ರಶ್ನೆ ಮಾಡಿದ್ದಾರೆ.

ವಾರಂಗಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೆಟಿಆರ್‌ ಈ ರೀತಿ ಪ್ರಶ್ನೆ ಕೇಳಿದರು. ಇದಕ್ಕೂ ಹಿಂದೆ ರಾಹುಲ್‌ ಗಾಂಧಿ ಅವರು ವಾರಂಗಲ್‌ನಲ್ಲೇ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದರು.

ADVERTISEMENT

ಕಾಂಗ್ರೆಸ್ ಧೂಳೀಪಟವಾಗಿದೆ ಎಂದು ವ್ಯಂಗ್ಯವಾಡಿದ ಟಿಆರ್‌ಎಸ್ ನಾಯಕ ಕೆಟಿಆರ್‌, ಆ ಪಕ್ಷದೊಂದಿಗೆ ಯಾರು ಮೈತ್ರಿ ಮಾಡಿಕೊಳ್ಳಲು ಬಯಸುತ್ತಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಸ್ವಂತ ಕ್ಷೇತ್ರವನ್ನು ಗೆಲ್ಲಲು ಸಾಧ್ಯವಾಗದ ರಾಹುಲ್ ಅವರು ತೆಲಂಗಾಣ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಗೆಲ್ಲುವಂತೆ ಮಾಡುತ್ತಾರೆಯೇ ಎಂದು ಕೆಟಿಆರ್ ಮತ್ತೊಂದು ಪ್ರಶ್ನೆ ಎಸೆದರು.

ರಾಹುಲ್‌ ಗಾಂಧಿ ಅವರು ತೆಲಂಗಾಣದ ಕಾಂಗ್ರೆಸ್‌ ಕೇಂದ್ರ ಕಚೇರಿ ‘ಗಾಂಧಿ ಭವನ’ವನ್ನು ‘ಗೋಡ್ಸೆ’ಗೆ ನೀಡಿದ್ದಾರೆ. ರಾಹುಲ್‌ ಗಾಂಧಿ ಅವರು ಯಾರೋ ಬರೆದುಕೊಟ್ಟಿದ್ದನ್ನು ಇಲ್ಲಿ ಬಂದು ಓದಿದ್ದಾರೆ ಎಂದು ಕೆಟಿಆರ್‌ ಕುಹಕವಾಡಿದ್ದಾರೆ.

ತೆಲಂಗಾಣದಲ್ಲಿ ರೈತರ ಆತ್ಮಹತ್ಯೆ ಬಗ್ಗೆ ರಾಹುಲ್‌ ಗಾಂಧಿ ನೀಡಿದ್ದ ಹೇಳಿಕೆಗೆ ಕೆಟಿಆರ್ ತಿರುಗೇಟು ನೀಡಿದರು. ‘ತೆಲಂಗಾಣದಲ್ಲಿ ಅತಿ ಕಡಿಮೆ ಆತ್ಮಹತ್ಯೆಗಳು ಸಂಭವಿಸಿವೆ ಎಂದು ಕೇಂದ್ರ ಸರ್ಕಾರವೇ ಘೋಷಿಸಿದೆ. ಕಾಂಗ್ರೆಸ್‌ಗೆ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಪಂಜಾಬ್ ಚುನಾವಣೆಯಲ್ಲಿ ಅವರು ಏಕೆ ಸೋತರು’ ಎಂದು ಕೆಟಿಆರ್‌ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.