ADVERTISEMENT

ಪರಿಸರ ಪರಿಣಾಮ ಮೌಲ್ಯಮಾಪನ ಕರಡು ಅಧಿಸೂಚನೆ ಭಾಷಾಂತರಕ್ಕೆ ವಿರೋಧ ಏಕೆ

ಕೇಂದ್ರ ಸರ್ಕಾರಕ್ಕೆ ದೆಹಲಿ ಹೈ ಕೋರ್ಟ್‌ ಪ್ರಶ್ನೆ, ತೊಡಕುಗಳನ್ನು ತಿಳಿಸಲು ಫೆ.25ರವರೆಗೆ ಗಡುವ

ಪಿಟಿಐ
Published 27 ಜನವರಿ 2021, 8:29 IST
Last Updated 27 ಜನವರಿ 2021, 8:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳಿಗೆ ‘ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣಾ ಕರಡು ಅಧಿಸೂಚನೆ–2020 (ಇಐಎ)‘ಯನ್ನು ಭಾಷಾಂತರಿಸಲು ಕೇಂದ್ರ ಸರ್ಕಾರ ಏಕೆ ವಿರೋಧಿಸುತ್ತಿದೆ ಎಂಬುದೇ ತಿಳಿಯುತ್ತಿಲ್ಲ‘ ಎಂದು ದೆಹಲಿಯ ಹೈಕೋರ್ಟ್ ಬುಧವಾರ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರನ್ನೊಳಗೊಂಡ ವಿಶೇಷ ನ್ಯಾಯಪೀಠ, ‘ಈ ಕರಡು ಅಧಿಸೂಚನೆಯನ್ನು ಎಲ್ಲ ಭಾಷಿಕರೂ ಅರ್ಥ ಮಾಡಿಕೊಂಡು ಆಕ್ಷೇಪಣೆ ಸಲ್ಲಿಸಬಹುದು. ಹೀಗಿದ್ದಾಗ, ಎಲ್ಲ ಭಾಷೆಗಳಿಗೂ ಇದನ್ನು ಅನುವಾದಿಸುವುದರಿಂದ ಸರ್ಕಾರಕ್ಕೆ ಏನು ತೊಂದರೆಯಾಗಲಿದೆ‘ ಎಂದು ಪ್ರಶ್ನಿಸಿದೆ.

ಕರಡು ಅಧಿಸೂಚನೆಯನ್ನು ಎಲ್ಲ ಭಾಷೆಗಳಿಗೆ ಭಾಷಾಂತರಿಸುವಂತೆ ಕೋರಿ ಅರ್ಜಿದಾರರ ಪರ ವಕೀಲ ಗೋಪಾಲ ಶಂಕರನಾರಾಯಣ್ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರಕ್ಕೆ ಈ ಪ್ರಶ್ನೆ ಕೇಳಿದೆ.

ADVERTISEMENT

ಅರ್ಜಿ ವಿಚಾರಣೆ ವೇಳೆ ಕೇಂದ್ರದ ಪರ ನ್ಯಾಯಾಲಯಕ್ಕೆ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್(ಎಎಸ್‌ಜಿ) ಚೇತನ್‌ ಶರ್ಮಾ, ‘ಈ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಈಗಾಗಲೇ ದೇಶದಾದ್ಯಂತ 20 ಲಕ್ಷಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ಹೀಗಾಗಿ, ಇದನ್ನು ಹೆಚ್ಚು ಭಾಷೆಗಳಿಗೆ ಅನುವಾದಿಸುವ ಅಗತ್ಯವಿಲ್ಲ‘ ಎಂದು ಪೀಠಕ್ಕೆ ತಿಳಿಸಿದ್ದಾರೆ.

‘ಈ ಕರಡು ಅಧಿಸೂಚನೆಯನ್ನು 22 ಭಾಷೆಗಳಿಗೆ ಅನುವಾದ ಮಾಡುವುದರಿಂದ ಸಾಕಷ್ಟು ಆಡಳಿತಾತ್ಮಕ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಜತೆಗೆ ಸರ್ಕಾರದ ಬಳಿ, ಈ ಎಲ್ಲ ಭಾಷೆಗಳಿಗೆ ಅನುವಾದ ಮಾಡುವ ಸೌಲಭ್ಯವೂ ಇಲ್ಲ‘ ಎಂದು ಹೇಳಿದ್ದಾರೆ.

‘ಅನುವಾದದ ವಿಚಾರದಲ್ಲಿ ಆಡಳಿತಾತ್ಮಕವಾಗಿಯೂ ಗೊಂದಲಗಳಿವೆ. ಹಾಗೆಯೇ ಅಧಿಸೂಚನೆಯನ್ನು ಎಲ್ಲಾ ಭಾಷೆಗಳಿಗೆ ಅನುವಾದಿಸಲೇಬೇಕೆಂದು ಸಂವಿಧಾನದಲ್ಲಿ ಹೇಳಿಲ್ಲ‘ ಎಂದು ಎಎಸ್‌ಜಿ, ಪೀಠಕ್ಕೆ ತಿಳಿಸಿದ್ದಾರೆ.

ಕೇಂದ್ರದ ಈ ನಿಲುವನ್ನು ಒಪ್ಪದ ನ್ಯಾಯಾಲಯ, ‘ಇಂಥ ಆಧುನಿಕ ದಿನಗಳಲ್ಲಿ, ಅನುವಾದ ದಂತಹ ಕಾರ್ಯಗಳನ್ನು ಮಾಡುವುದು ಅಸಾಧ್ಯವೇನಲ್ಲ‘ ಎಂದು ಹೇಳಿದೆ. ಆದರೆ, ಇಐಎ ಕರಡನ್ನು ಎಲ್ಲ ಭಾಷೆಗಳಿಗೆ ಅನುವಾದ ಮಾಡುವಲ್ಲಿ ಇರುವ ತೊಂದರೆಗಳನ್ನು ಗುರುತಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

‘ಯಾವುದೇ ಅಂತಿಮ ಅಧಿಸೂಚನೆಯನ್ನು ಎಲ್ಲ ಭಾಷೆಗಳಿಗೆ ಅನುವಾದ ಮಾಡುವ ಅಗತ್ಯವಿಲ್ಲ ಎಂದು ಸಂವಿಧಾನ ಹೇಳುತ್ತದೆ, ನಿಜ. ಆದರೆ, ಸಾರ್ವಜನಿಕ ಅಭಿಪ್ರಾಯವನ್ನು ಕೇಳುವುದಕ್ಕಾಗಿಯೇ ಹೊರಡಿಸುವ ಕರಡು ಪ್ರತಿಯ ಬಗ್ಗೆ ಅದು ಏನನ್ನೂ ಹೇಳುವುದಿಲ್ಲ‘ ಎಂದು ಕೇಳಿದೆ.

ಸಾರ್ವಜನಿಕರಿಂದ ಅಭಿಪ್ರಾಯ ಕೇಳುವುದಕ್ಕಾಗಿ ರೂಪಿಸುವ ಕರಡು ಪ್ರತಿಯನ್ನು ಸ್ಥಳೀಯ ಭಾಷೆಗಳಿಗೆ ಅನುವಾದ ಮಾಡುವುದರಿಂದ ವರದಿಯಲ್ಲಿನ ಮಾಹಿತಿಗಳನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಂಡು ಪ್ರತಿಕ್ರಿಯಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ ನ್ಯಾಯಾಲಯ, ಕರಡನ್ನು ಎಲ್ಲಾ ಭಾಷೆಗಳಿಗೆ ಅನುವಾದಿಸುವಲ್ಲಿ ಆಗುವ ತೊಂದರೆಗಳನ್ನು ಗುರುತಿಸಿ ತಿಳಿಸಲು ಫೆಬ್ರುವರಿ 25ರವರೆಗೆ ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದೆ.

ಕಳೆದ ವರ್ಷ ಜೂ.30ರಂದು ದೆಹಲಿ ಹೈಕೋರ್ಟ್‌ ‘ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಕರಡು ಅಧಿಸೂಚನೆ‘ಯನ್ನು ಎಲ್ಲ ಸ್ಥಳೀಯ ಭಾಷೆಗಳಲ್ಲಿ ಪ್ರಕಟಿಸಬೇಕೆಂದು ಆದೇಶಿಸಿತ್ತು.‌ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ ಈ ಆದೇಶವನ್ನು ಪರಿಷ್ಕರಿಸುವಂತೆ ಮನವಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.