ADVERTISEMENT

ನೆಹರೂ ವಿರುದ್ಧ ದ್ವೇಷ ಏಕೆ: ಕೇಂದ್ರಕ್ಕೆ ಸಂಜಯ್‌ ರಾವುತ್‌ ಪ್ರಶ್ನೆ

ಪಿಟಿಐ
Published 5 ಸೆಪ್ಟೆಂಬರ್ 2021, 8:30 IST
Last Updated 5 ಸೆಪ್ಟೆಂಬರ್ 2021, 8:30 IST
ಸಂಜಯ್‌ ರಾವುತ್‌
ಸಂಜಯ್‌ ರಾವುತ್‌   

ಮುಂಬೈ: ‘ಮಾಜಿ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಅವರನ್ನು ಕೇಂದ್ರ ಸರ್ಕಾರ ಏಕೆಇಷ್ಟೊಂದು ದ್ವೇಷಿಸುತ್ತಿದೆ’ ಎಂದು ಶಿವಸೇನಾ ಸಂಸದ ಸಂಜಯ್‌ ರಾವುತ್‌ ಅವರು ಭಾನುವಾರ ಪ್ರಶ್ನಿಸಿದ್ದಾರೆ.

ಕೇಂದ್ರ ಶಿಕ್ಷಣ ಸಚಿವಾಲಯ ಅಡಿಯಲ್ಲಿರುವ ಸ್ವಾಯತ್ತ ಸಂಸ್ಥೆ ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ (ಐಸಿಎಚ್ಆರ್‌) ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪೋಸ್ಟರ್‌ ಬಿಡುಗಡೆಗೊಳಿಸಿದೆ.

‘ಈ ಪೋಸ್ಟರ್‌ನಲ್ಲಿ ನೆಹರೂ ಮತ್ತು ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರ ಭಾವಚಿತ್ರವನ್ನು ಕೈಬಿಟ್ಟಿದೆ. ಇದು ಕೇಂದ್ರ ಸರ್ಕಾರದ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ’ ಎಂದು ರಾವುತ್‌ ಅವರು ಶಿವಸೇನಾ ಮುಖವಾಣಿ ‘ಸಾಮ್ನಾ’ ಪತ್ರಿಕೆಯಲ್ಲಿ ಪ್ರಕಟವಾದ ರೋಖ್‌ಟೋಕ್‌ ಅಂಕಣದಲ್ಲಿ ದೂರಿದ್ದಾರೆ.

ADVERTISEMENT

‘ಇತಿಹಾಸ ರಚನೆ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರನ್ನು ಪೋಸ್ಟರ್‌ನಿಂದ ಹೊರಗಿಟ್ಟಿದ್ದಾರೆ. ಇದು ದ್ವೇಷ ರಾಜಕಾರಣದ ನಡೆಯಾಗಿದೆ. ಇದರಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನವಾಗಿದೆ’ ಎಂದು ರಾವುತ್‌ ಹೇಳಿದ್ದಾರೆ.

‘ಸ್ವಾತಂತ್ರ್ಯದ ಬಳಿಕ ನೆಹರೂ ಅವರು ಜಾರಿಗೆ ತಂದ ನೀತಿಗಳ ಬಗ್ಗೆ ಕೆಲವರಿಗೆ ಭಿನ್ನಾಭಿ‍ಪ್ರಾಯಗಳಿರಬಹುದು. ಆದರೆ, ಸ್ವಾತಂತ್ರ್ಯ ಹೋರಾಟದಲ್ಲಿ ಅವರು ನೀಡಿದ ಕೊಡುಗೆಯನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಇಷ್ಟೊಂದು ದ್ವೇಷಿಸುವುದಕ್ಕೆ ಕಾರಣ ಏನು? ಆ ರೀತಿಯ ಏನು ಕೆಲಸ ಮಾಡಿದ್ದಾರೆ?’ ಎಂದು ಪ್ರಶ್ನಿಸಲಾಗಿದೆ.

ಇತ್ತೀಚಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಾಜ್ಯದ ಶಾಲೆಗಳಲ್ಲಿ ಉಚಿತವಾಗಿ ವಿತರಿಸಲಾಗುವ ಬ್ಯಾಗ್‌ಗಳಿಂದ ಮಾಜಿ ಮುಖ್ಯಮಂತ್ರಿಗಳಾದ ಜಯಲಲಿತಾ ಮತ್ತು ಇ.ಕೆ ಪಳನಿಸ್ವಾಮಿ ಅವರ ಚಿತ್ರಗಳನ್ನು ತೆಗೆಯದಿರಲು ನಿರ್ಧರಿಸಿದ್ದಾರೆ. ಸ್ಟಾಲಿನ್‌ ಅವರು ರಾಜಕೀಯ ಪ್ರಬುದ್ಧತೆಯನ್ನು ತೋರಿಸಿದರೆ, ನೀವು ಯಾಕೆ ನೆಹರೂ ಅವರನ್ನು ಇಷ್ಟೊಂದು ದ್ವೇಷಿಸುತ್ತೀರಿ’ ಎಂದು ಬಿಜೆಪಿಯ ಹೆಸರನ್ನು ‍ಪ್ರಸ್ತಾ‍ಪಿಸದೆ ರಾವುತ್‌ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.