ADVERTISEMENT

ಅರಾವಳಿ ಪರ್ವತ ಶ್ರೇಣಿಗೆ ಸಂಕಟ: ಕೇಂದ್ರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಡಿಸೆಂಬರ್ 2025, 6:55 IST
Last Updated 22 ಡಿಸೆಂಬರ್ 2025, 6:55 IST
   
ಅರಣ್ಯ ಸಂರಕ್ಷಣಾ ನಿಯಮಗಳ (2022) ತಿದ್ದುಪಡಿ ಪ್ರಕಾರ ‘ಅರಾವಳಿ ಶ್ರೇಣಿ ವ್ಯಾಪ್ತಿಯಲ್ಲಿ 100 ಮೀಟರ್‌ಗಿಂತ ಕಡಿಮೆ ಎತ್ತರದಲ್ಲಿರುವ ಬೆಟ್ಟಗಳಲ್ಲಿ ಗಣಿಗಾರಿಕೆಗೆ ಯಾವುದೇ ಆಕ್ಷೇಪವಿರುವುದಿಲ್ಲ’ ಎಂಬ ಕೇಂದ್ರ ಸರ್ಕಾರದ ವ್ಯಾಖ್ಯಾನಕ್ಕೆ ಸುಪ್ರೀಂ ಕೋರ್ಟ್‌ ಅನುಮೋದನೆ ನೀಡಿದೆ. ಈ ನಿರ್ಧಾರವನ್ನು ಖಂಡಿಸಿ ರಾಜಸ್ತಾನ ಮತ್ತು ಹರಿಯಾಣದಲ್ಲಿ ವ್ಯಾಪಕ ಪ್ರತಿಭಟನೆಗಳು ಆರಂಭಗೊಂಡಿವೆ.

ಹರಿಯಾಣದ ಗುರುಗ್ರಾಮದಿಂದ ರಾಜಸ್ಥಾನದ ಉದಯಪುರದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದೆ. ಭಿತ್ತಿಪತ್ರಗಳನ್ನು ಹಿಡಿದ ಪ್ರತಿಭಟನಾಕಾರರು ಗುರುಗ್ರಾಮದಲ್ಲಿ, ರಾಜ್ಯದ(ಹರಿಯಾಣ) ಸಚಿವ ರಾವ್ ನರಬೀರ್ ಸಿಂಗ್ ಅವರ ನಿವಾಸದ ಮುಂದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಸರ ಕಾರ್ಯಕರ್ತರು, ಸಾಮಾಜಿಕ ಸಂಘಟನೆಗಳ ಸದಸ್ಯರು ಮತ್ತು ಸ್ಥಳೀಯರು ಭಾಗವಹಿಸಿದ್ದರು.

ಅರಾವಳಿ ಶ್ರೇಣಿಗಳ ಬಗ್ಗೆ ಕೇಂದ್ರದ ಹೊಸ ವ್ಯಾಖ್ಯಾನವು ಪರಿಸರ ಸಮತೋಲನಕ್ಕೆ ಹಾನಿಕಾರಕವೆಂದು ಪರಿಸರ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹೊಸ ವ್ಯಾಖ್ಯಾನವನ್ನು ವಿರೋಧಿಸಿ ಉದಯಪುರದಲ್ಲಿ ವಕೀಲರೂ ಬೀದಿಗಿಳಿದ್ದಾರೆ.

ಬ್ಯಾನರ್‌ ಮತ್ತು ಫಲಕಗಳನ್ನು ಹಿಡಿದ ಪ್ರತಿಭಟನಾಕಾರರು, 'ಅರಾವಳಿ ಉಳಿಸಿ, ಭವಿಷ್ಯವನ್ನು ಉಳಿಸಿ' ಮತ್ತು 'ಅರಾವಳಿ ಇಲ್ಲದೆ, ಬದುಕಿಲ್ಲ' ಎಂಬ ಘೋಷಣೆಗಳನ್ನು ಕೂಗಿದರು. ಅಲ್ಲದೇ ಹೊಸ ವ್ಯಾಖ್ಯಾನವನ್ನು ಅನುಮೋದಿಸುವ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆಯೂ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

ಪರಿಸರ ಕಾರ್ಯಕರ್ತರು ಹೇಳುವುದೇನು?

  • ಹೊಸ ವ್ಯಾಖ್ಯಾನವು ಗಣಿಗಾರಿಕೆ, ನಿರ್ಮಾಣ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಉತ್ತೇಜಿಸಬಹುದು. ಇದರಿಂದಾಗಿ ಅರಾವಳಿ ಶ್ರೇಣಿಯ ನೈಸರ್ಗಿಕ ಸೌಂದರ್ಯ ನಾಶವಾಗುವ ಅಪಾಯ ಹೆಚ್ಚಿದೆ.

  • ಈ ನಿರ್ಧಾರವು ಅದರ ಪರಿಸರ ಸಮತೋಲನಕ್ಕೆ ಹಾನಿಕಾರಕವಾಗಬಹುದು ಎಂದು ಪ್ರತಿಭಟನಾಕಾರರೊಬ್ಬರು ತಿಳಿಸಿದ್ದಾರೆ.

  • ಅರಾವಳಿ ಪರ್ವತ ಶ್ರೇಣಿಯು ದೆಹಲಿ-ಎನ್‌ಸಿಆರ್ ಪ್ರದೇಶಕ್ಕೆ ನೈಸರ್ಗಿಕವಾಗಿ ರಕ್ಷಣಾತ್ಮಕ ಕೋಟೆಯಂತೆ ಕಾರ್ಯನಿರ್ವಹಿಸುತ್ತದೆ. ಮಾಲಿನ್ಯ, ಮರುಭೂಮೀಕರಣ ಮತ್ತು ನೀರಿನ ಬಿಕ್ಕಟ್ಟನ್ನು ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

  • ಅರಾವಳಿಯನ್ನು ಸರ್ಕಾರ ಸಂಪೂರ್ಣ ಸಂರಕ್ಷಿತ ಪ್ರದೇಶವೆಂದು ಘೋಷಿಸಬೇಕು ಮತ್ತು ಕಟ್ಟುನಿಟ್ಟಾದ ಸಂರಕ್ಷಣಾ ನೀತಿಯನ್ನು ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದ್ದಾರೆ.

  • ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯೊಂದಿಗೆ ರಾಜಿ ಮಾಡಿಕೊಳ್ಳಲಾಗದು.ಮುಂದಿನ ಪೀಳಿಗೆಯ ಸುರಕ್ಷಿತ ಭವಿಷ್ಯಕ್ಕಾಗಿ ಅರಾವಳಿಯ ಸಂರಕ್ಷಣೆ ಮುಖ್ಯ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಅರಾವಳಿ ಶ್ರೇಣಿ ವ್ಯಾಪ್ತಿಯಲ್ಲಿ 100 ಮೀಟರ್‌ಗಿಂತ ಕಡಿಮೆ ಎತ್ತರದಲ್ಲಿರುವ ಬೆಟ್ಟಗಳಲ್ಲಿ ಗಣಿಗಾರಿಕೆಗೆ ಯಾವುದೇ ಆಕ್ಷೇಪವಿರುವುದಿಲ್ಲ’ ಎಂಬ ಕೇಂದ್ರ ಸರ್ಕಾರದ ಕ್ರಮವನ್ನು ರಾಜಸ್ಥಾನ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಟಿಕಾ ರಾಮ್ ಜೂಲಿ ಟೀಕಿಸಿದ್ದಾರೆ.

‌ಅರಾವಳಿ ಶ್ರೇಣಿಯು ಮರುಭೂಮೀಕರಣವನ್ನು ತಡೆಗಟ್ಟುವಲ್ಲಿ ಮತ್ತು ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಹೊಸ ವ್ಯಾಖ್ಯಾನವು ಭಾರಿ ಪರಿಸರ ಹಾನಿ ಮತ್ತು ಮರುಭೂಮೀಕರಣಕ್ಕೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಒಂದೆಡೆ, ನೀವು 'ತಾಯಿಯ ಹೆಸರಿನಲ್ಲಿ ಇಂದು ಸಸಿ' ಎಂಬ ಅಭಿಯಾನವನ್ನು ನಡೆಸುತ್ತಿದ್ದೀರಿ. ಮತ್ತೊಂದೆಡೆ, ನಿಮ್ಮ ಸ್ನೇಹಿತರಿಗಾಗಿ ಲಕ್ಷಾಂತರ ಮರಗಳನ್ನು ಕಡಿಯುತ್ತಿದ್ದೀರಿ. ಇದು ತಪ್ಪು. ಅರಾವಳಿ ರಾಜಸ್ಥಾನದ ಜೀವನಾಡಿ. ಈ ಪರ್ವತ ಶ್ರೇಣಿ ಇಲ್ಲದಿದ್ದರೆ, ದೆಹಲಿಯವರೆಗಿನ ಇಡೀ ಪ್ರದೇಶವು ಮರುಭೂಮಿಯಾಗಿರುತ್ತಿತ್ತು ಎಂದು ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಅರಾವಳಿ ಪರ್ವತದ ಕುರಿತ ಸುಪ್ರೀಂಕೋರ್ಟ್ ನಿರ್ಧಾರವು ಆ ಪ್ರದೇಶಗಳಲ್ಲಿ ಗಣಿಗಾರಿಕೆ, ಕಟ್ಟಡ ನಿರ್ಮಾಣ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಮತ್ತು ಇದರಿಂದಾಗಿ ಇಲ್ಲಿನ ಪ್ರಕೃತಿ ಸೌಂದರ್ಯ ನಾಶವಾಗುವ ಅಪಾಯವಿದೆ. ಈ ನಿರ್ಧಾರವು ಪಾರಿಸರಿಕ ಸಮತೋಲನಕ್ಕೆ ಹಿನ್ನಡೆಯುಂಟು ಮಾಡಲಿದೆಯೆಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನ್ಯಾಯವಾದಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.

ಅರಾವಳಿ ಉಳಿಸಿ ಆಂದೋಲನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟ್ರೆಂಡಿಂಗ್ ಆಗುತ್ತಿದೆ. ಸಹಸ್ರಾರು ಮಂದಿ Save Aravalli , No Aravalli, No Life ಹ್ಯಾಷ್‌ ಟ್ಯಾಗ್‌ ಮೂಲಕ ಚಳವಳಿಗೆ ಶಕ್ತಿ ತುಂಬುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.