ADVERTISEMENT

ಉತ್ತರಾಖಂಡದ ಜೋಶಿಮಠ ಎಂಬ ಊರು ಕುಸಿಯುತ್ತಿರುವುದೇ? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜನವರಿ 2023, 2:42 IST
Last Updated 7 ಜನವರಿ 2023, 2:42 IST
ಜೋಶಿಮಠದ ಮನೆಯ ಗೋಡೆ ಬಿರುಕುಬಿಟ್ಟಿರುವುದು
ಜೋಶಿಮಠದ ಮನೆಯ ಗೋಡೆ ಬಿರುಕುಬಿಟ್ಟಿರುವುದು    

ಡೆಹ್ರಾಡೂನ್‌: ಮಾನವ ಮತ್ತು ನಿಸರ್ಗ ಮೂಲದ ಅಂಶಗಳು ಜೋಶಿಮಠ ಊರಿನ ಅವನತಿಗೆ ಕಾರಣವಾಗಿವೆ ಎಂದು 'ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ'ಯ ನಿರ್ದೇಶಕ ಕಲಾಚಂದ್ ಸೇನ್ ಶುಕ್ರವಾರ ಹೇಳಿದ್ದಾರೆ.

ಸಮಸ್ಯೆಗೆ ಇತ್ತೀಚಿನ ಅಂಶಗಳು ಮಾತ್ರ ಕಾರಣವಲ್ಲ, ಹಲವಾರು ವರ್ಷಗಳಿಂದ ಸಮಸ್ಯೆ ಬೆಳೆಯುತ್ತಾ ಬಂದಿದೆ ಎಂದು ಅವರು ವಿವರಿಸಿದ್ದಾರೆ.

‘ಜೋಶಿಮಠ ಊರು ಕುಸಿತವಾಗಲು, ಅಲ್ಲಿನ ಕಟ್ಟಡಗಳ ಅಡಿಪಾಯಗಳು ದುರ್ಬಲವಾಗಲು ಮೂರು ಮುಖ್ಯ ಕಾರಣಗಳಿವೆ. ಶತಮಾನಕ್ಕೂ ಹೆಚ್ಚು ಹಿಂದೆ ಭೂಕಂಪದಿಂದ ಉಂಟಾದ ಭೂಕುಸಿತದ ಅವಶೇಷಗಳ ಮೇಲೆ ಊರು ಅಭಿವೃದ್ಧಿಯಾಗಿದೆ. ಈ ಪ್ರದೇಶವು ಭೂಕಂಪನ ವಲಯ ‘V’ ಯಲ್ಲಿ ನೆಲೆಗೊಂಡಿದೆ. ಹೀಗಾಗಿ ಈ ಸ್ಥಳದಲ್ಲಿ ಹೆಚ್ಚಾಗಿ ಭೂಕಂಪನಗಳು ಸಂಭವಿಸುತ್ತಲೇ ಇರುತ್ತವೆ, ಮಣ್ಣಿನಡಿ ನೀರು ಜಿನುಗುತ್ತಲೇ ಇರುತ್ತದೆ. ಈ ಕಾರಣದಿಂದಾಗಿ ಕಾಲಾನಂತರದಲ್ಲಿ ನೆಲದಡಿಯ ಬಂಡೆಗಳು ಧಾರಣ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಇಡೀ ಪ್ರದೇಶ ದುರ್ಬಲವಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಭೂಕುಸಿತದ ಅವಶೇಷಗಳ ಮೇಲೆ ಜೋಶಿಮಠದ ರಚನೆಯಾಗಿರುವ ಬಗ್ಗೆ ಅಟ್ಕಿನ್ಸ್ 1886ರಲ್ಲಿ ಹಿಮಾಲಯನ್ ಗೆಜೆಟಿಯರ್‌ನಲ್ಲಿ ಮೊದಲ ಬಾರಿಗೆ ಬರೆದಿದ್ದಾರೆ. ಮಿಶ್ರಾ ಸಮಿತಿಯು 1976 ರಲ್ಲಿ ತನ್ನ ವರದಿಯಲ್ಲಿ ಇದೇ ಅಂಶವನ್ನೇ ಒತ್ತಿ ಹೇಳಿದೆ’ ಎಂದು ಸೇನ್‌ ಹೇಳಿದರು.

ಕಳೆದ ವರ್ಷ ಋಷಿಗಂಗಾ ಮತ್ತು ಧೌಲಿಗಂಗಾ ನದಿಗಳಲ್ಲಿ ಉಂಟಾದ ಪ್ರವಾಹ, ಹಿಮಾಲಯದ ನದಿಗಳು ಮತ್ತು ಭಾರೀ ಮಳೆಯು ಇಲ್ಲಿನ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಾನವ ಮೂಲದ ಕಾರಣ...

ಉತ್ತರಾಖಂಡದಲ್ಲಿ ಅದರಲ್ಲಿಯೂ ವಿಶೇಷವಾಗಿ ಜೋಶಿಮಠವು ಇರುವ ಚಮೋಲಿ ಜಿಲ್ಲೆಯಲ್ಲಿ ‍ಪ್ರಕೃತಿ ವಿಕೋಪಗಳು ನಿರಂತರವಾಗಿ ನಡೆಯುತ್ತಿವೆ. 2021ರ ಮೇಯಲ್ಲಿ ಚಮೋಲಿ ಜಿಲ್ಲೆಯಲ್ಲಿ ಭೂಕಂಪ ಉಂಟಾಗಿತ್ತು. ಭೂಕಂಪದ ತೀವ್ರತೆಯು ರಿಕ್ಟರ್‌ ಮಾಪಕದಲ್ಲಿ 4.3ರಷ್ಟಿತ್ತು. ಭೂಕಂಪನದ ಕೇಂದ್ರವು ಜೋಶಿಮಠದ ಸಮೀಪವೇ ಇತ್ತು.

2021ರ ಫೆಬ್ರುವರಿಯಲ್ಲಿ ತಪೋವನ ವಿಷ್ಣುಗಡ ಜಲವಿದ್ಯುತ್ ಯೋಜನೆಯ ಅಣೆಕಟ್ಟೆಯ ಸಮೀಪ ಸಂಭವಿಸಿದ್ದ ಹಿಮಕುಸಿತದಲ್ಲಿ 204 ಮಂದಿ ನಾಪತ್ತೆಯಾಗಿದ್ದರು. ಅದರಲ್ಲಿ 83 ಮಂದಿಯ ಮೃತದೇಹ ಮತ್ತು 36 ಮಂದಿಯ ದೇಹದ ಭಾಗಗಳು ಸಿಕ್ಕಿದ್ದವು. ಇಂತಹ ದುರಂತಗಳು ಸಾಮಾನ್ಯ ಎಂಬಂತೆ ಇಲ್ಲಿ ಘಟಿಸುತ್ತಿವೆ.

ಈ ಪ್ರದೇಶದಲ್ಲಿ 15,000ಕ್ಕೂ ಹೆಚ್ಚು ಹಿಮಗಲ್ಲುಗಳಿವೆ. ಪ್ರತಿ ದಶಕದಲ್ಲಿ ಇವು 100ರಿಂದ 200 ಅಡಿಯಷ್ಟು ಕೆಳಕ್ಕೆ ಇಳಿಯುತ್ತಿವೆ. ಈ ಹಿಮಗಲ್ಲುಗಳು ಅತ್ಯಂತ ವೇಗವಾಗಿ ಕರಗುತ್ತಿವೆ. ಹೀಗೆ ಕರಗಿದ ಹಿಮಗಲ್ಲುಗಳು ದಿಢೀರ್‌ ಹಿಮಸರೋವರಗಳನ್ನು ಸೃಷ್ಟಿಸುತ್ತವೆ. ನೀರನ್ನು ಹಿಡಿದಿಟ್ಟುಕೊಳ್ಳಲಾಗದ ಮಣ್ಣು ಬಿರುಕು ಬಿಡುತ್ತದೆ ಮತ್ತು ದಿಢೀರ್‌ ಪ್ರವಾಹಗಳು ಉಂಟಾಗುತ್ತವೆ. 2021ರಲ್ಲಿ ಧೌಲಿಗಂಗಾ ನದಿಯಲ್ಲಿ ಉಂಟಾದ ಪ್ರವಾಹದಲ್ಲಿ 70ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

ಅಲಕನಂದಾ–ಭಾಗೀರಥಿ ನದಿಗೆ ಅಣೆಕಟ್ಟೆ ಕಟ್ಟಲೇಬಾರದು ಎಂದು ಪರಿಣತರ ಸಮಿತಿಯು ಶಿಫಾರಸು ಮಾಡಿತ್ತು. ಹಿಮಗಲ್ಲು ಪ್ರದೇಶದಲ್ಲಿ ಅಣೆಕಟ್ಟೆ ನಿರ್ಮಿಸಬೇಡಿ ಎಂದು ಸುಪ್ರೀಂ ಕೋರ್ಟ್‌ ಕೂಡ 2014ರಲ್ಲಿ ಹೇಳಿತ್ತು. ಆದರೆ ಸರ್ಕಾರವು ಈ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಅಣೆಕಟ್ಟೆ ನಿರ್ಮಾಣ ಮಾಡಲಾಯಿತು.

ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರೀನಾಥವನ್ನು ಸಂಪರ್ಕಿಸುವ 900 ಕಿ.ಮೀ. ಉದ್ದದ ಹೆದ್ದಾರಿ–ಚಾರ್‌ ಧಾಮ್‌ ಹೆದ್ದಾರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ₹12,000 ಕೋಟಿ ವೆಚ್ಚದ ಯೋಜನೆ ಇದು. ನಿರ್ಮಾಣ ಕಾಮಗಾರಿಗಳನ್ನು ನಡೆಸಲೇಬಾರದು ಎಂದು ಪರಿಣತರು ಹಲವು ಬಾರಿ ಹೇಳಿದ್ದಾರೆ. ಆದರೆ, ಉತ್ತರಾಖಂಡದಲ್ಲಿ ಉಂಟಾದ ಪ್ರವಾಹಕ್ಕೆ ಈ ಯೋಜನೆ ಕಾರಣ ಅಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು 2021ರಲ್ಲಿ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.