ADVERTISEMENT

ರಾಹುಲ್ ಗಾಂಧಿ ಮದುವೆಯಾಗುವ ಹುಡುಗಿ ಹೇಗಿರಬೇಕು? ಅವರೇ ಹೇಳಿದ್ದಾರೆ ಕೇಳಿ!

ಪಿಟಿಐ
Published 24 ಜನವರಿ 2023, 5:02 IST
Last Updated 24 ಜನವರಿ 2023, 5:02 IST
   

ನವದೆಹಲಿ: ಭಾರತದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದು ಕರೆಸಿಕೊಳ್ಳುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೂಕ್ತ ಹುಡುಗಿ ಸಿಕ್ಕಾಗ ಮದುವೆಯಾಗುತ್ತೇನೆ ಎಂದು ಹೇಳಿದ್ಧಾರೆ.

ಆಹಾರ ಮತ್ತು ಪ್ರವಾಸಕ್ಕೆ ಸಂಬಂಧಿಸಿದ ಯೂಟ್ಯೂಬ್ ಚಾನಲ್ ‘ಕರ್ಲಿ ಟೇಲ್ಸ್’ ಜೊತೆಗಿನ ಮಾತುಕತೆ ವೇಳೆ ರಾಹುಲ್ ಈ ರೀತಿ ಹೇಳಿದ್ದಾರೆ.

ಸದಾ ರಾಜಕೀಯ ವಿಷಯವೇ ಇರುತ್ತಿದ್ದ ಹಿಂದಿನ ಸಂದರ್ಶನಗಳಿಗೆ ಭಿನ್ನವಾಗಿ ಈ ಬಾರಿ ಆಹಾರ, ವ್ಯಾಯಾಮ ಸೇರಿದಂತೆ ವೈಯಕ್ತಿಕ ವಿಚಾರಗಳ ಬಗ್ಗೆ ಈ ಮಾತುಕತೆ ನಡೆದಿದೆ.

ADVERTISEMENT

ಯಾವಾಗ ಮದುವೆಯಾಗುತ್ತೀರಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಮದುವೆಗೆ ನನ್ನ ವಿರೋಧ ಇಲ್ಲ. ಸಮಸ್ಯೆ ಎಂದರೆ ನನ್ನ ಪೋಷಕರು ಹಾಕಿಕೊಟ್ಟಿರುವ ಮಾನದಂಡ. ಏಕೆಂದರೆ, ಅವರದ್ದು ಅತ್ಯಂತ ಸುಂದರವಾದ ವಿವಾಹವಾಗಿತ್ತು. ಅವರು ಪರಸ್ಪರ ತುಂಬಾ ಪ್ರೀತಿಸುತ್ತಿದ್ದರು. ಹಾಗಾಗಿ, ನನ್ನ ನಿರೀಕ್ಷೆ ದೊಡ್ಡದಿದೆ’ ಎಂದು ಹೇಳಿದ್ದಾರೆ.

‘ನನ್ನ ನಿರೀಕ್ಷೆಗೆ ತಕ್ಕನಾದ ಸೂಕ್ತ ಹುಡುಗಿ ಸಿಕ್ಕರೆ ವಿವಾಹವಾಗುತ್ತೇನೆ’ ಎಂದು ಅವರು ಹೇಳಿದ್ದಾರೆ.

ಹಾಗಾದರೆ, ನೀವು ಮದುವೆಯಾಗುವ ಹುಡುಗಿ ಹೀಗೇ ಇರಬೇಕೆಂಬ ಪಟ್ಟಿ ಏನಾದರೂ ನಿಮ್ಮಲ್ಲಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನನ್ನನ್ನು ಪ್ರೀತಿಸುವ ಹುಡುಗಿಯಾಗಿರಬೇಕು ಮತ್ತು ಜಾಣೆಯಾಗಿರಬೇಕು’ ಎಂದಿದ್ದಾರೆ.

ರಾಜಸ್ಥಾನದಲ್ಲಿ ನಡೆದ ಭಾರತ್ ಜೋಡೊ ಯಾತ್ರೆಯ ಮಧ್ಯಾಹ್ನದ ಭೋಜನದ ಸಂದರ್ಭ ನಡೆದ ಮಾತುಕತೆಯಲ್ಲಿ, ‘ನಾನು ಇಲ್ಲಿ ಊಟದ ಬಗ್ಗೆ ಹೆಚ್ಚು ನಿರ್ದಿಷ್ಟವಾಗಿಲ್ಲ. ಬಟಾಣಿ ಮತ್ತು ಹಲಸಿನ ಖಾದ್ಯ ಬಿಟ್ಟು ಉಳಿದಂತೆ ಏನಿದ್ದರೆ ಅದನ್ನು ತಿನ್ನುತ್ತೇನೆ. ಆದರೆ, ಮನೆಯಲ್ಲಿ ಕಠಿಣ ಡಯಟ್ ಪಾಲಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೊ ಯಾತ್ರೆ ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿದೆ. ದಣಿವರಿಯದ ಸಿಪಾಯಿಯಂತೆ ಕಾರ್ಯಕರ್ತರು, ಮುಖಂಡರ ಜೊತೆ ರಾಹುಲ್ ಗಾಂಧಿ ಹೆಜ್ಜೆ ಹಾಕುತ್ತಲೇ ಇದ್ದಾರೆ.

ಯಾತ್ರೆ ವೇಳೆ ಊಟದ ಬಗ್ಗೆ ನಾನು ಹೆಚ್ಚು ಆಯ್ಕೆಗಳ ಹಿಂದೆ ಹೋಗುವುದಿಲ್ಲ. ತೆಲಂಗಾಣದಲ್ಲಿ ಖಾರ, ಮಸಾಲೆ ಸ್ವಲ್ಪ ಹೆಚ್ಚಾಗಿಯೇ ಇತ್ತು. ನಾನು ಅಷ್ಟೊಂದು ಖಾರ ತಿನ್ನುವುದಿಲ್ಲ ಎಂದು ಹೇಳಿದರು.

ಮನೆಯಲ್ಲಿ ನಿಮಗೆ ಯಾವ ರೀತಿಯ ಊಟ ಸಿದ್ಧಪಡಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಾಮಾನ್ಯವಾಗಿ ಮಧ್ಯಾಹ್ನದ ಊಟಕ್ಕೆ ದೇಸಿ ಶೈಲಿಯ ಅಡುಗೆ ಇರುತ್ತದೆ. ರಾತ್ರಿ ವೇಳೆ ಕಾಂಟಿನೆಂಟಲ್ ಫುಡ್ ಸಹ ಸೇರಿರುತ್ತದೆ. ಮನೆಯಲ್ಲಿ ನಾನು ಕಠಿಣ ಡಯಟ್ ಅನುಸರಿಸುತ್ತೇನೆ. ಹಾಗಾಗಿ, ಸಿಹಿ ಪದಾರ್ಥಗಳ ಸೇವನೆಯನ್ನು ತಪ್ಪಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.