ADVERTISEMENT

ಹರಿಯಾಣ | ಶಂಭು ಗಡಿ ತೆರೆದಾಗ ದೆಹಲಿಗೆ ದಾಂಗುಡಿ: ಪ್ರತಿಭಟನಾನಿರತ ರೈತರ ಎಚ್ಚರಿಕೆ

ಪಿಟಿಐ
Published 16 ಜುಲೈ 2024, 12:35 IST
Last Updated 16 ಜುಲೈ 2024, 12:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಢ: ‘ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಾಪಿಸಲಾಗಿರುವ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದಾಗ ಹರಿಯಾಣದ ಅಂಬಾಲದ ಬಳಿ ಶಂಭು ಗಡಿಯಲ್ಲಿ ಬೀಡುಬಿಟ್ಟಿರುವ ರೈತರು ದೆಹಲಿಯತ್ತ ನುಗ್ಗಲಿದ್ದಾರೆ’ ಎಂದು ರೈತ ಮುಖಂಡ ಜಗಜೀತ ಸಿಂಗ್ ಡಲ್ಲೇವಾಲ್ ಮಂಗಳವಾರ ಹೇಳಿದ್ದಾರೆ.

ಶಂಭು ಗಡಿಯಲ್ಲಿ ಸ್ಥಾಪಿಸಲಾಗಿರುವ ಬ್ಯಾರಿಕೇಡ್‌ಗಳನ್ನು ‘ಪ್ರಾಯೋಗಿಕ ಆಧಾರ’ದಲ್ಲಿ ತೆಗೆದುಹಾಕುವಂತೆ ಹರಿಯಾಣ ಸರ್ಕಾರಕ್ಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೂಚಿಸಿದ ಬೆನ್ನಲ್ಲೇ, ರೈತ ಮುಖಂಡ ಜಗಜೀತ ಸಿಂಗ್ ಡಲ್ಲೇವಾಲ್ ಅವರ ಈ ಹೇಳಿಕೆ ಹೊರಬಿದ್ದಿದೆ. 

ಫೆಬ್ರುವರಿ 13ರಿಂದ ಶಂಭು ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 

ADVERTISEMENT

ಹೆದ್ದಾರಿಗಳು ತೆರೆದಾಗ, ದೆಹಲಿಯತ್ತ ತೆರಳಬೇಕು ಎನ್ನುವುದು ನಮ್ಮ ನಿರ್ಧಾರವಾಗಿದೆ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಖಾತ್ರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ಡಲ್ಲೇವಾಲ್ ಹೇಳಿದ್ದಾರೆ. 

ಮತ್ತೊಂದೆಡೆ, ಹೆದ್ದಾರಿಯನ್ನು ಬ್ಯಾರಿಕೇಡ್‌ಗಳಿಂದ ಮುಕ್ತಗೊಳಿಸಬೇಕು ಎಂಬ ಹೈಕೋರ್ಟ್ ಆದೇಶ ಪ್ರಶ್ನಿಸಿ ಹರಿಯಾಣ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆಹೋಗಿದೆ. ಒಂದು ವೇಳೆ ಹೆದ್ದಾರಿ ತೆರೆದರೆ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ತನ್ನ ಅರ್ಜಿಯಲ್ಲಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.