ADVERTISEMENT

ಸಿಎಎ, ಎನ್‌ಆರ್‌ಸಿ, ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಬಿಡುವುದಿಲ್ಲ: ಮಮತಾ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 13:02 IST
Last Updated 12 ಏಪ್ರಿಲ್ 2024, 13:02 IST
ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ
ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ   

ಕೋಲ್ಕತ್ತಾ: ಸಿಎಎ, ಎನ್‌ಆರ್‌ಸಿ, ಏಕರೂಪ ನಾಗರಿಕ ಸಂಹಿತೆಯನ್ನು ಪಶ್ಚಿಮ ಬಂಗಾಳದಲ್ಲಿ ಜಾರಿಗೊಳಿಸಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಈದ್-ಉಲ್-ಫಿತರ್ ಸಲುವಾಗಿ ಆಯೋಜಿಸಿದ್ದ ರೆಡ್ ರೋಡ್‌ ಸಭೆಯಲ್ಲಿ ತಿಳಿಸಿದರು.

‘ಸಿಎಎ, ಎನ್‌ಆರ್‌ಸಿ, ಏಕರೂಪ ನಾಗರಿಕ ಸಂಹಿತೆಯನ್ನು ಬಲವಂತವಾಗಿ ಅನುಷ್ಠಾನಗೊಳಿಸಲು ಒಪ್ಪುವುದಿಲ್ಲ. ಜನರನ್ನು ಹೇಗೆ ದ್ವೇಷಿಸಬೇಕೆಂದು ನನಗೆ ತಿಳಿದಿಲ್ಲ, ನಾನು ದ್ವೇಷದ ಭಾಷಣಗಳನ್ನು ನೀಡುವುದಿಲ್ಲ. ಎಲ್ಲರೂ ಸಹೋದರರಂತೆ ಶಾಂತಿ ಮತ್ತು ಸೌಹಾರ್ದತೆಯಿಂದ ಬಾಳುವುದು ನನಗೆ ಬೇಕು. ನಾವು ಒಗ್ಗಟ್ಟಾಗಿ ಬದುಕಿದರೆ, ಯಾರೂ ನಮಗೆ ಹಾನಿಯನ್ನುಂಟುಮಾಡಲು ಸಾಧ್ಯವಿಲ್ಲ, ಈ ಒಗ್ಗಟ್ಟನ್ನು ಯಾರೂ ಮುರಿಯಲು ಬಿಡಬೇಡಿ’ ಎಂದು ಬ್ಯಾನರ್ಜಿ ಹೇಳಿದರು.

ಧರ್ಮದ ಹೆಸರಿನಲ್ಲಿ ಗಲಭೆಗಳನ್ನು ಹುಟ್ಟುಹಾಕುವ ಜನರಿದ್ದಾರೆ, ನೀವು ಶಾಂತವಾಗಿರಿ. ಇಲ್ಲಿ ಗಲಭೆ ಸೃಷ್ಟಿಸುವವರ ಪ್ರಯತ್ನ ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಬ್ಯಾನರ್ಜಿ ಹೇಳಿದರು.

ADVERTISEMENT

ಬಿಜೆಪಿಯನ್ನು ಉಲ್ಲೇಖಿಸಿ, ಬ್ಯಾನರ್ಜಿ ಅವರು ಚುನಾವಣೆಗಳು ಸಮೀಪಿಸುತ್ತಿದ್ದಂತೆ  ಜನರನ್ನು, ಮುಖ್ಯವಾಗಿ ವಿರೋಧ ಪಕ್ಷದ ನಾಯಕರನ್ನು ಹೆದರಿಸಲು ಕೇಂದ್ರ ಸರ್ಕಾರಿ ಸಂಸ್ಥೆಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದರು.

‘ಚುನಾವಣೆಯ ಸಮಯದಲ್ಲಿ ಏಜೆನ್ಸಿಗಳ ಹೆಸರಿನಲ್ಲಿ ಜನರನ್ನು ಹೆದರಿಸಲು ಪ್ರಯತ್ನಿಸುತ್ತಾರೆ. ಅವರ ಹಿಂದೆ ಸಿಬಿಐ, ಇಡಿ, ಆದಾಯ ತೆರಿಗೆ ಮತ್ತು ಎನ್‌ಐಎ ಅನ್ನು ಬಿಡುತ್ತಾರೆ. ಎಲ್ಲರನ್ನೂ ಕಂಬಿ ಹಿಂದೆ ಹಾಕಲು ನಾನು ಅವರಿಗೆ (ಬಿಜೆಪಿ) ಜೈಲು ನಿರ್ಮಿಸಲು ಹೇಳುತ್ತೇನೆ ಆದರೆ ಅವರು ಇಡೀ 130 ಕೋಟಿ ಜನಸಂಖ್ಯೆಯನ್ನು ಜೈಲಿಗೆ ಹಾಕಲು ಸಾಧ್ಯವೇ?, ನಾನು ದೇಶಕ್ಕಾಗಿ ರಕ್ತ ನೀಡಲು ಸಿದ್ಧನಿದ್ದೇನೆ ಆದರೆ ಈ ಚಿತ್ರಹಿಂಸೆಯನ್ನು ಸಹಿಸುವುದಿಲ್ಲ’, ಎಂದು ಅವರು ಹೇಳಿದರು.

ಚುನಾವಣೆ ಸಮೀಪಿಸುತ್ತಿರುವ ಈ ಸಮಯದಲ್ಲಿ, ದೇಶದ ಆಯ್ದ ಕೆಲವು ಮುಸ್ಲಿಂ ನಾಯಕರಿಗೆ ಆಫರ್‌ಗಳೊಂದಿಗೆ ಕರೆಗಳು ಬರುತ್ತಿವೆ ಎಂದು ಯಾವುದೇ ಹೆಸರನ್ನು ಹೇಳದೆ ಮಮತಾ ಬ್ಯಾನರ್ಜಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.