ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್
ಕುಡಲೋರ್: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮುಂದುವರಿಸಿದ್ದಾರೆ. ರಾಜ್ಯಕ್ಕೆ ₹ 10,000 ಕೋಟಿ ಅನುದಾನ ನೀಡುವುದಾಗಿ ಕೇಂದ್ರ ಘೊಷಿಸಿದರೂ, ಎನ್‌ಇಪಿಯನ್ನು ಜಾರಿಮಾಡುವುದಿಲ್ಲ ಎಂದು ಶನಿವಾರ ಸ್ಪಷ್ಟವಾಗಿ ಹೇಳಿದ್ದಾರೆ.
ಎನ್‌ಇಪಿಗೆ ವಿರೋಧ ವ್ಯಕ್ತಪಡಿಸಿರುವುದು ಹಿಂದಿ ಹೇರಿಕೆಯ ಕಾರಣಕ್ಕಷ್ಟೇ ಅಲ್ಲ. ವಿದ್ಯಾರ್ಥಿಗಳ ಭವಿಷ್ಯ ಹಾಗೂ ಸಾಮಾಜಿಕ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಲ್ಲ ಹಲವು ಅಂಶಗಳೂ ಇದಕ್ಕೆ ಕಾರಣ ಎಂದು ಪ್ರತಿಪಾದಿಸಿದ್ದಾರೆ.
ಪೋಷಕರು ಮತ್ತು ಶಿಕ್ಷಕರ ಸಂಘಟನೆ ಕುಡಲೋರ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಸ್ಟಾಲಿನ್, 'ವೈದ್ಯಕೀಯ ಕೋರ್ಸ್‌ಗಳಿಗೆ ನೀಟ್ ಪರೀಕ್ಷೆ ಇರುವಂತೆ, ಕಲೆ ಮತ್ತು ವಿಜ್ಞಾನ ಪದವಿ ತರಗತಿಗಳಿಗೆ ದಾಖಲಾಗಲು ಪ್ರವೇಶ ಪರೀಕ್ಷೆ ಇರುವುದನ್ನು ಹೊರತಪಡಿಸಿ, ನೂತನ ಶಿಕ್ಷಣ ನೀತಿಯಲ್ಲಿ ಪದವಿಯ ನಡುವೆಯೇ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸುವ ಅವಕಾಶ ಕಲ್ಪಿಸಿದೆ' ಎಂದು ಹೇಳಿದ್ದಾರೆ.
'ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಲು ಅವಕಾಶ ಕಲ್ಪಿಸುವುದು, ವಿದ್ಯಾಭ್ಯಾಸವನ್ನು ನಿಲ್ಲಿಸುವಂತೆ ಹೇಳಿದಂತೆ' ಎಂದಿದ್ದಾರೆ.
ಹಾಗೆಯೇ, 'ನಾವು ಯಾವುದೇ ಭಾಷೆಯನ್ನು ವಿರೋಧಿಸುತ್ತಿಲ್ಲ. ಆದರೆ, ಹೇರಿಕೆಯನ್ನು ತಿರಸ್ಕರಿಸುವ ವಿಚಾರದಲ್ಲಿ ಅಚಲವಾಗಿದ್ದೇವೆ. ಹಿಂದಿ ಹೇರಿಕೆ ಕಾರಣಕ್ಕಷ್ಟೇ ನಾವು ಎನ್‌ಇಪಿಯನ್ನು ವಿರೋಧಿಸುತ್ತಿಲ್ಲ. ಇನ್ನೂ ಹಲವು ಕಾರಣಗಳಿವೆ. ಎನ್‌ಇಪಿಯು ನಮ್ಮನ್ನು ಹಿಂದಕ್ಕೆ ಕರೆದೊಯ್ಯುತ್ತದೆ. ಇದು ಮಕ್ಕಳನ್ನು ಶಿಕ್ಷಣದಿಂದ ದೂರವಿಡುತ್ತದೆ' ಎಂದು ಒತ್ತಿ ಹೇಳಿದ್ದಾರೆ.
'ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನಿಲ್ಲಿಸುವುದಲ್ಲದೆ, ಮೂರನೇ, ಐದನೇ ಹಾಗೂ ಎಂಟನೇ ತರಗತಿಗಳಿಗೆ ಸಾರ್ವಜನಿಕ ಪರೀಕ್ಷೆಯನ್ನು ಪ್ರಸ್ತಾಪಿಸಲಾಗಿದೆ. ಹಾಗೆಯೇ, ಕಲೆ ಮತ್ತು ವಿಜ್ಞಾನ ಪದವಿ ತರಗತಿಗಳಿಗೆ ದಾಖಲಾಗಲು ಪ್ರವೇಶ ಪರೀಕ್ಷೆಯನ್ನು ಎನ್‌ಇಪಿ ಪರಿಚಯಿಸುತ್ತದೆ' ಎಂದು ಸಿಎಂ ಹೇಳಿದ್ದಾರೆ.
ಮುಂದುವರಿದು, 'ಎನ್‌ಇಪಿ ಅನುಷ್ಠಾನಗೊಳಿಸಿದರೆ ತಮಿಳುನಾಡಿಗೆ ₹ 2,000 ಕೋಟಿ ದೊರೆಯಲಿದೆ ಎಂದು ಕೇಂದ್ರ ಹೇಳುತ್ತಿದೆ. ಕೇಂದ್ರವು ₹ 10,000 ಕೋಟಿ ನೀಡಿದರೂ ಎನ್‌ಇಪಿಯನ್ನು ಜಾರಿಮಾಡುವುದಿಲ್ಲ ಎಂದು ಹೇಳಲು ಬಯಸುತ್ತೇನೆ. ರಾಜ್ಯವನ್ನು 2,000 ವರ್ಷಗಳಷ್ಟು ಹಿಂದಕ್ಕೆ ತಳ್ಳುವ ಪಾಪದ ಕೆಲಸ ಮಾಡುವುದಿಲ್ಲ' ಎಂದು ಕಟುವಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.