ಜೈಪುರ: ‘ದೇಶ ರಕ್ಷಣೆ ವೇಳೆ ಪತಿಯು ಹುತಾತ್ಮರಾಗಿರುವುದು ನನಗೆ ಹೆಮ್ಮೆಯ ವಿಚಾರ. ಅವರು ಹುತಾತ್ಮರಾಗಿರುವುದಕ್ಕೆ ಕಣ್ಣೀರಿಡಲಾರೆ. ದೇಶಕ್ಕಾಗಿ ತ್ಯಾಗ ಮಾಡುವುದು ಗೌರವದ ವಿಚಾರ’. ಹೀಗೆ ಹೇಳಿದ್ದು ಹಂದ್ವಾರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕರ್ನಲ್ ಆಶುತೋಷ್ ಶರ್ಮಾ ಅವರ ಪತ್ನಿ ಪಲ್ಲವಿ ಶರ್ಮಾ.
ಆಶುತೋಷ್ ಶರ್ಮಾ ಅವರು ಪತ್ನಿ ಪಲ್ಲವಿ ಶರ್ಮಾ, 12 ವರ್ಷ ವಯಸ್ಸಿನ ಮಗಳು ತಮನ್ನಾರನ್ನು ಅಗಲಿದ್ದಾರೆ. ಇವರಿಬ್ಬರೂ ರಾಜಸ್ಥಾನದ ವೈಶಾಲಿನಗರದ ರಂಗೋಲಿ ಗಾರ್ಡನ್ಸ್ ಸೊಸೈಟಿಯಲ್ಲಿ ವಾಸವಿದ್ದಾರೆ. ಪಲ್ಲವಿ ಅವರ ಕುಟುಂಬದವರು ಮತ್ತು ತಾಯಿ ಜೈಪುರದ ಜೈಸಿಂಗಾಪುರದಲ್ಲಿ ವಾಸವಿದ್ದಾರೆ.
‘ಮೇ 1ರಂದು ಅವರ ಬಳಿ ಮಾತನಾಡಿದ್ದೇನೆ. ಅದಾದ ಬಳಿಕ ಅವರು ಕಾರ್ಯಾಚರಣೆಗೆ ತೆರಳಿದ್ದರು. ಫೆಬ್ರುವರಿ 28ರಂದು ಉಧಂಪುರದಲ್ಲಿ ನಾವು ಭೇಟಿಯಾಗಿದ್ದೆವು. ಅದೇ ಕೊನೆ, ಆ ಬಳಿಕ ದೂರವಾಣಿಯಲ್ಲಷ್ಟೇ ಮಾತುಕತೆ’ ಎಂದು ಹಿಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಪಲ್ಲವಿ ಶರ್ಮಾ.
‘ದೇಶ ಸೇವೆ ಮಾಡಬೇಕಿದ್ದರೆ ಸೇನೆ ಸೇರಲೇಬೇಕು ಎಂದೇನೂ ಇಲ್ಲ. ಒಬ್ಬ ಉತ್ತಮ ಮತ್ತು ಜವಾಬ್ದಾರಿಯುತ ಮಾನವನಾಗುವುದು ಮುಖ್ಯ. ಎಲ್ಲರೂ ಅವರ ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿದರೆ ಅದುವೇ ದೇಶ ಸೇವೆ’ ಎಂದೂ ಪಲ್ಲವಿ ಶರ್ಮಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.