ಚೆನ್ನೈ: ‘ರಾಜ್ಯದಲ್ಲಿ ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ಚಪ್ಪಲಿ ಧರಿಸುವುದಿಲ್ಲ’ ಎಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದರು.
‘ಅಣ್ಣಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ ನಡೆದಿರುವುದನ್ನು ಖಂಡಿಸಿ ಪ್ರತಿಭಟನೆಯ ಭಾಗವಾಗಿ ಶುಕ್ರವಾರ ತಮ್ಮ ನಿವಾಸದ ಮುಂದೆ ಆರು ಬಾರಿ ಛಡಿಯೇಟು ಹೊಡೆದುಕೊಳ್ಳುತ್ತೇನೆ’ ಎಂದರು.
ಕೊಯಮತ್ತೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಡಿಎಂಕೆಯನ್ನು ಅಧಿಕಾರದಿಂದ ಕಿತ್ತೊಗೆಯಲು ಇದೇ ಡಿ.26ರಿಂದ 48 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ. ಈ ಕೆಲಸ ನೆರವೇರಿಸಲು ಹೆಚ್ಚಿನ ಶಕ್ತಿ ನೀಡಲಿ ಎಂದು ರಾಜ್ಯದಲ್ಲಿ ಆರು ಮುರುಗ ದೇವಾಲಯಗಳಿಗೂ ಭೇಟಿ ನೀಡುತ್ತೇನೆ’ ಎಂದರು.
‘ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದ ಲೈಂಗಿಕ ಕಿರುಕುಳದಲ್ಲಿ ಸಂತ್ರಸ್ತೆಯ ಹೆಸರನ್ನು ಬಹಿರಂಗಗೊಳಿಸುವ ಮೂಲಕ ಎಫ್‌ಐಆರ್ ಸೋರಿಕೆ ಮಾಡಿದ್ದಕ್ಕೆ ಯಾರು ಹೊಣೆ? ನಿಜವಾದ ಆರೋಪಿ ಯಾರು ಎಂಬುದೇ ಅನುಮಾನ ಹುಟ್ಟಿಸಿದೆ. ಅತ್ಯಂತ ಕೆಟ್ಟದಾಗಿ ಎಫ್‌ಐಆರ್ ಬರೆದಿದ್ದು, ಸೋರಿಕೆಗೆ ಹೊಣೆಯಾದವರ ಬಗ್ಗೆ ಪೊಲೀಸರು ಈಗಲಾದರೂ ಮಾತನಾಡಬೇಕು’ ಎಂದು ಒತ್ತಾಯಿಸಿದರು.
ಚಪ್ಪಲಿ ಧರಿಸಲ್ಲ ಎಂದು ಘೋಷಣೆ ಮಾಡಿದ ಅಣ್ಣಾಮಲೈ ಸುದ್ದಿಗೋಷ್ಠಿ ಬಳಿಕ ಶೂಗಳನ್ನು ಕಳಚಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.