ADVERTISEMENT

ಚಂದ್ರನ ದಕ್ಷಿಣ ಧ್ರುವದ ಮೇಲೆ ಮತ್ತೆ ಚಿತ್ತ: ಇಸ್ರೊ ಅಧ್ಯಕ್ಷ ಕೆ.ಶಿವನ್‌

ಮತ್ತೆ ‘ಸಾಫ್ಟ್‌ ಲ್ಯಾಂಡಿಂಗ್‌’ಗೆ ಪ್ರಯತ್ನ

ಪಿಟಿಐ
Published 2 ನವೆಂಬರ್ 2019, 20:20 IST
Last Updated 2 ನವೆಂಬರ್ 2019, 20:20 IST
ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಇಸ್ರೊ ಅಧ್ಯಕ್ಷ ಕೆ.ಶಿವನ್‌  – ಪಿಟಿಐ ಚಿತ್ರ
ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಇಸ್ರೊ ಅಧ್ಯಕ್ಷ ಕೆ.ಶಿವನ್‌  – ಪಿಟಿಐ ಚಿತ್ರ   

ನವದೆಹಲಿ: ‘ಚಂದ್ರಯಾನ 2 ಇಸ್ರೊ ಕನಸಿನ ಅಂತ್ಯವಲ್ಲ. ಭವಿಷ್ಯದಲ್ಲಿ ಮತ್ತೆ ಬಾಹ್ಯಾಕಾಶದಲ್ಲಿ ಮೃದು ನೆಲಸ್ಪರ್ಶಕ್ಕೆ (ಸಾಫ್ಟ್‌ ಲ್ಯಾಂಡಿಂಗ್‌) ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್‌ ಶನಿವಾರ ಹೇಳಿದರು.

ಐಐಟಿ ದೆಹಲಿಯಲ್ಲಿ ಆಯೋಜಿಸಲಾಗಿದ್ದ 50ನೇ ವರ್ಷದ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ‘ಚಂದ್ರಯಾನ 2ಯೋಜನೆಯಲ್ಲಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌(ನಿಧಾನವಾಗಿ ಲ್ಯಾಂಡರ್‌ ಅನ್ನು ಇಳಿಸುವ ಪ್ರಕ್ರಿಯೆ)ನಡೆಸುವಲ್ಲಿ ಇಸ್ರೊ ವಿಫಲವಾಗಿರಬಹುದು. ಆದರೆ ಚಂದ್ರನ ಮೇಲ್ಮೈಗಿಂತ 300 ಮೀಟರ್‌ ಎತ್ತರದವರೆಗೂ ಲ್ಯಾಂಡರ್‌ ಕಾರ್ಯನಿರ್ವಹಿಸಿದೆ. ಭವಿಷ್ಯದಲ್ಲಿ ಈ ಯೋಜನೆ ಯಶಸ್ವಿಗೊಳಿಸಲು ಅಗತ್ಯವಿರುವ ಎಲ್ಲ ಮೌಲ್ಯಯುತವಾದ ದತ್ತಾಂಶಗಳು ಸಂಗ್ರಹವಾಗಿವೆ.ಇವುಗಳನ್ನು ಬಳಸಿಕೊಂಡು ಭವಿಷ್ಯದಲ್ಲಿ ಮತ್ತೆ ಸಾಫ್ಟ್‌ ಲ್ಯಾಂಡಿಂಗ್‌ಗೆ ಇಸ್ರೊ ಪ್ರಯತ್ನಿಸಲಿದೆ’ ಎಂದರು.

ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡರ್‌ ಇಳಿಸುವ ಪ್ರಯತ್ನಕ್ಕೆ ಇಸ್ರೊ ಮತ್ತೊಮ್ಮೆ ಪ್ರಯತ್ನಿಸಲಿದೆಯೇ ಎನ್ನುವ ಪ್ರಶ್ನೆಗೆ, ‘ಖಂಡಿತವಾಗಿಯೂ’ ಎಂದು ಶಿವನ್‌ ಉತ್ತರಿಸಿದರು.

ADVERTISEMENT

ಹಲವು ಯೋಜನೆಗಳಿಗೆ ಸಿದ್ಧತೆ: ಪ್ರಸ್ತುತ ಆದಿತ್ಯ ಎಲ್‌1 ಸೌರ ಯೋಜನೆ, ಮಾನವಸಹಿತ ಗಗನಯಾನ ಯೋಜನೆಗೆ ಸಿದ್ಧತೆ ನಡೆಯುತ್ತಿದೆ.ಮುಂದಿನ ದಿನಗಳಲ್ಲಿ ಅತ್ಯಾಧುನಿಕ ಉಪಗ್ರಹಗಳ ಉಡಾವಣೆಗೆ ಇಸ್ರೊ ಸಜ್ಜಾಗಿದೆ. ಡಿಸೆಂಬರ್‌ ಅಥವಾ ಜನವರಿಯಲ್ಲಿಎಸ್‌ಎಸ್‌ಎಲ್‌ವಿ ಉಡಾವಣೆ ಪರೀಕ್ಷೆ ನಡೆಯಲಿದೆ. ಶೀಘ್ರದಲ್ಲೇ 200 ಟನ್‌ ಸೆಮಿ–ಕ್ರಯೊ ಎಂಜಿನ್‌ ಪರೀಕ್ಷೆ ಆರಂಭವಾಗಲಿದೆ’ ಎಂದರು.

ಕಾರ್ಯಕ್ರಮದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಕೋಶ(ಎಸ್‌ಟಿಸಿ) ರಚಿಸುವ ಸಂಬಂಧ ಇಸ್ರೊ–ಐಐಟಿ ದೆಹಲಿಒಪ್ಪಂದ ಮಾಡಿಕೊಂಡಿತು. ಒಟ್ಟು 1,217 ಸ್ನಾತಕೋತ್ತರ ಪದವೀಧರರಿಗೆ ಹಾಗೂ 825 ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.

ಜಾಣ್ಮೆಯಿಂದ ಭವಿಷ್ಯ ರೂಪಿಸಿ
ಐಐಟಿಗಳು ಭಾರತದಲ್ಲಿ ತಾಂತ್ರಿಕ ಶಿಕ್ಷಣದ ಅತ್ಯುತ್ತಮ ಸಂಸ್ಥೆಗಳಾಗಿವೆ. ಮೂರು ದಶಕದ ಹಿಂದೆ ಐಐಟಿ ಬಾಂಬೆಯಿಂದ ಪದವಿ ಪಡೆದು ಹೊರಬಂದ ಬಳಿಕ, ಪ್ರಸ್ತುತ ಇರುವಷ್ಟು ಉದ್ಯೋಗಾವಕಾಶಗಳು ಇರಲಿಲ್ಲ. ಕಾಲ ಬದಲಾಗಿದ್ದು, ಹಲವು ಆಯ್ಕೆಗಳು ನಿಮ್ಮ ಮುಂದಿವೆ. ಹೀಗಾಗಿ ಜಾಣ್ಮೆಯಿಂದ ನಿಮ್ಮ ಭವಿಷ್ಯ ರೂಪಿಸಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.