ADVERTISEMENT

ವಿಳಂಬವಾದ DCM ಶಿಂದೆ ವಿಮಾನ ಕಿಡ್ನಿ ಸಮಸ್ಯೆಯಿದ್ದ ಮಹಿಳೆಗೆ ನೆರವಾಗಿದ್ದು ಹೇಗೆ?

ಪಿಟಿಐ
Published 7 ಜೂನ್ 2025, 13:32 IST
Last Updated 7 ಜೂನ್ 2025, 13:32 IST
<div class="paragraphs"><p>&nbsp;(ಚಿತ್ರ ಕೃಪೆ–@Shivsenaofc)</p></div>

 (ಚಿತ್ರ ಕೃಪೆ–@Shivsenaofc)

   

ಮುಂಬೈ: ಜಲಗಾಂವ್‌ ವಿಮಾನ ನಿಲ್ದಾಣದಿಂದ ಮುಂಬೈಗೆ ವಾಪಸಾಗುವ ವೇಳೆ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಅವರ ತಂಡ ಮುಂಬೈನಲ್ಲಿ ತುರ್ತಾಗಿ ಮೂತ್ರಪಿಂಡ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಮಹಿಳೆಯೊಬ್ಬರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಪಾಲ್ಖಿ ಯಾತ್ರೆಯಲ್ಲಿ ಪಾಲ್ಗೊಂಡು, ಸಂತ ಮುಕ್ತಾಯಿ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ, ಶಿಂದೆ ಹಾಗೂ ಅವರ ತಂಡ ಶುಕ್ರವಾರ ರಾತ್ರಿ 9.15ರ ವೇಳೆಗೆ ಜಲಗಾಂವ್ ವಿಮಾನ ನಿಲ್ದಾಣಕ್ಕೆ ಮರಳಿದ್ದರು. ಆದರೆ ಪೈಲಟ್ ತನ್ನ ಕೆಲಸದ ಸಮಯ ಮುಕ್ತಾಯಗೊಂಡಿದೆ ಎಂಬ ಕಾರಣವನ್ನು ನೀಡಿ ವಿಮಾನ ಕಾರ್ಯಾಚರಣೆಗೆ ನಿರಾಕರಿಸಿದ್ದರು. ಇದರಿಂದ ಶಿಂದೆ ಅವರು ಸುಮಾರು ಒಂದು ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿಯೇ ಇದ್ದರು.

ADVERTISEMENT

ಇದೇ ಸಮಯದಲ್ಲಿ ಶೀತಲ್ ಬೋರ್ಡೆ ಎಂಬ ಮಹಿಳೆ ತನ್ನ ಪತಿಯೊಂದಿಗೆ ಮುಂಬೈಗೆ ಪ್ರಯಾಣಿಸಬೇಕಿತ್ತು, ಆದರೆ ದಂಪತಿ ನಿಲ್ದಾಣಕ್ಕೆ ತಲುಪುವ ಮೊದಲೇ ವಿಮಾನ ಹೊರಟಿತ್ತು.

ವಿಮಾನ ನಿಲ್ದಾಣದಲ್ಲಿದ್ದ ಕಾರ್ಯಕರ್ತರಿಗೆ ಬೋರ್ಡೆ ತನ್ನ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ. ತಕ್ಷಣ ಅವರು ರಾಜ್ಯ ಸಚಿವ ಗಿರೀಶ್ ಮಹಾಜನ್ ಅವರನ್ನು ಸಂಪರ್ಕಿಸಿದ್ದಾರೆ. ಬಳಿಕ ಅವರು ಶಿಂದೆ ಅವರಿಗೆ ಮಾಹಿತಿ ನೀಡಿದ್ದಾರೆ.

ಮಹಿಳೆಯ ಸ್ಥಿತಿಯ ಬಗ್ಗೆ ತಿಳಿದ ಶಿಂದೆ ಅವರು ತಮ್ಮ ಚಾರ್ಟರ್ಡ್ ವಿಮಾನದಲ್ಲಿ ದಂಪತಿಯನ್ನು ಮುಂಬೈಗೆ ಕರೆದೊಯ್ದಿದ್ದಾರೆ. ಈ ಬಗ್ಗೆ ಶಿಂದೆ ಅವರ ಕಚೇರಿ ಶನಿವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಶಿಂದೆ ಅವರು ಜಲಗಾಂವ್‌ನಿಂದ ಮುಂಬೈಗೆ ಹಿಂತಿರುಗುವಾಗ, ಅವರ ವಿಮಾನ ಸ್ವಲ್ಪ ವಿಳಂಬವಾಯಿತು. ಇದರಿಂದ ತುರ್ತಾಗಿ ಮೂತ್ರಪಿಂಡ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಮಹಿಳೆಗೆ ನೆರವಾಗಲು ಸಾಧ್ಯವಾಯಿತು. 'ಅಲ್ಪ ವಿಳಂಬ ಒಂದು ಜೀವವನ್ನು ಉಳಿಸಿತು' ಎಂದು ಪ್ರಕಟಣೆ ತಿಳಿಸಿದೆ.

ಯಾವುದೇ ಹಿಂಜರಿಕೆಯಿಲ್ಲದೆ, ಶಿಂದೆ ಅವರು ಮಹಿಳೆ ಮತ್ತು ಅವರ ಪತಿಯನ್ನು ಮುಂಬೈಗೆ ತಮ್ಮ ಚಾರ್ಟರ್ಡ್ ವಿಮಾನದಲ್ಲಿ ಕರೆದುಕೊಂಡು ಬಂದರು. ಪ್ರಯಾಣದ ಸಮಯದಲ್ಲಿ, ಅವರೊಂದಿಗೆ ಸಂವಹನ ನಡೆಸಿ, ಚಿಕಿತ್ಸೆಯ ಬಗ್ಗೆಯೂ ವಿಚಾರಿಸಿದರು. ವಿಮಾನ ಮುಂಬೈನಲ್ಲಿ ಇಳಿದ ತಕ್ಷಣ ಆಂಬ್ಯುಲೆನ್ಸ್ ವ್ಯವಸ್ಥೆ ಖಚಿತಪಡಿಸಿಕೊಂಡರು. ಅಲ್ಲದೇ ಆಸ್ಪತ್ರೆಗೆ ದಾಖಲಾದ ಬಗ್ಗೆಯೂ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಿದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದಾಗ್ಯೂ ಮೂತ್ರಪಿಂಡವು ದಾನಿಗೆ ಹೊಂದಿಕೆಯಾಗದ ಕಾರಣ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗಿಲ್ಲ ಎಂದು ಡಿಸಿಎಂ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.