ADVERTISEMENT

ಕಾಂಡೊಮ್ ಪ್ಯಾಕಿನಿಂದ ಮಹಿಳೆ ತಲೆಗೆ ಬ್ಯಾಂಡೇಜ್ ಮಾಡಿದ ಆರೋಗ್ಯ ಕೇಂದ್ರ ಸಿಬ್ಬಂದಿ!

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 15:47 IST
Last Updated 20 ಆಗಸ್ಟ್ 2022, 15:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೋಪಾಲ: ಕಳಪೆ ಗುಣಮಟ್ಟದ ಆರೋಗ್ಯ ವ್ಯವಸ್ಥೆ, ಗರ್ಭಿಣಿಯರನ್ನು ಕರೆದೊಯ್ಯಲು ವಾಹನ ದೊರೆಯದಿರುವುದು, ಶವ ಸಾಗಾಟಕ್ಕೆ ವಾಹನ ಅಲಭ್ಯತೆಯಂಥ ಪ್ರಕರಣಗಳು ಮಧ್ಯ ಪ್ರದೇಶದ ಹಲವೆಡೆಗಳಲ್ಲಿ ಈ ಹಿಂದೆ ವರದಿಯಾಗಿದ್ದವು. ಇದೀಗ ಸಮುದಾಯ ಆರೋಗ್ಯ ಕೇಂದ್ರವೊಂದರಲ್ಲಿ ಮಹಿಳೆಯೊಬ್ಬರ ತಲೆಯ ಗಾಯಕ್ಕೆ ಕಾಂಡೊಮ್ ಪ್ಯಾಕೆಟ್‌ನಿಂದ ಬ್ಯಾಂಡೇಜ್ ಮಾಡಿದ ವಿಲಕ್ಷಣ ಘಟನೆ ವರದಿಯಾಗಿದೆ.

ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ರೇಷ್ಮಾ ಬಾಯಿ ಎಂಬ ಮಹಿಳೆಯ ತಲೆಯ ಗಾಯಕ್ಕೆ ತಾತ್ಕಾಲಿಕ ಬ್ಯಾಂಡೇಜ್ ಮಾಡಲು ಕಾಂಡೊಮ್ ಪ್ಯಾಕೆಟ್ ಬಳಸಲಾಗಿದೆ.

ರೇಷ್ಮಾ ಬಾಯಿ ಅವರ ತಲೆಗೆ ಗಾಯವಾಗಿ ರಕ್ತ ಸೋರುತ್ತಿತ್ತು. ಹೀಗಾಗಿ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರ ತಲೆಗೆ ಬ್ಯಾಂಡೇಜ್ ಮಾಡಿ ಮೊರೆನಾ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಬ್ಯಾಂಡೇಜ್ ಬದಲಾಯಿಸಲು ಮುಂದಾದ ವೈದ್ಯರಿಗೆ ಆಘಾತ ಕಾದಿತ್ತು. ಬ್ಯಾಂಡೇಜ್ ಒಳಗೆ ಕಾಂಡೊಮ್ ಪ್ಯಾಕೆಟ್ ದೊರೆತಿದೆ.

ಈ ಕುರಿತು ಮೊರೆನಾ ಜಿಲ್ಲೆಯ ಮುಖ್ಯ ಆರೋಗ್ಯಾಧಿಕಾರಿ ರಾಕೇಶ್ ಮಿಶ್ರಾ ಪ್ರತಿಕ್ರಿಯೆ ನೀಡಿದ್ದಾರೆ.

ಕಾರ್ಡ್‌ಬೋರ್ಡ್ ತುಣುಕಿನಂಥ ವಸ್ತುವನ್ನು ಹತ್ತಿಯ ಪ್ಯಾಡ್ ಜತೆ ಇರಿಸುವಂತೆ ವೈದ್ಯರು ವಾರ್ಡ್‌ಬಾಯ್‌ಗೆ ತಿಳಿಸಿದ್ದರು. ಆತ ಅದರ ಬದಲು ಕಾಂಡೊಮ್ ಪ್ಯಾಕೆಟ್ ಇರಿಸಿದ್ದ. ಆತನನ್ನು ತಕ್ಷಣದಿಂದಲೇ ಸೇವೆಯಿಂದ ತೆರವುಗೊಳಿಸಲಾಗಿದೆ ಎಂದು ರಾಕೇಶ್ ಮಿಶ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.