ADVERTISEMENT

ಮಹಿಳೆಯರ ದೂರು ಆಲಿಸಲು ಸಹಾಯವಾಣಿ: ವಾರದ ಎಲ್ಲಾ ದಿನಗಳಲ್ಲಿ 24 ಗಂಟೆಯೂ ಕಾರ್ಯ

ಲಾಕ್‌ಡೌನ್‌ ನಂತರ ಹೆಚ್ಚಾದ ಮಾನಸಿಕ ಕಿರುಕುಳ ಪ್ರಕರಣ

ಪಿಟಿಐ
Published 17 ಆಗಸ್ಟ್ 2020, 1:49 IST
Last Updated 17 ಆಗಸ್ಟ್ 2020, 1:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಾಕ್‌ಡೌನ್‌ ನಂತರದ ದಿನಗಳಲ್ಲಿ ಮಹಿಳೆಯರಿಗೆ ಮಾನಸಿಕ ಕಿರುಕುಳ ನೀಡುವ ಪ್ರಕರಣ ಗಳು ಹೆಚ್ಚುತ್ತಿದ್ದು, ಇಂಥವರಿಗೆ ನೆರ ವಾಗಲು, ವಾರದ ಎಲ್ಲಾ ದಿನಗಳಲ್ಲಿ, 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ ತೆರೆಯಲು ರಾಷ್ಟ್ರೀಯ ಮಹಿಳಾ ಆಯೋಗ ಮುಂದಾಗಿದೆ.

‘ಚಂಡಿಗಡದ ಪೋಸ್ಟ್‌ ಗ್ರಾಜುಯೇಟ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಎಜುಕೇಶನ್‌ ಆ್ಯಂಡ್‌ ರಿಸರ್ಚ್‌’ ಸಂಸ್ಥೆಯ ಸಹಯೋಗದಲ್ಲಿ, ಸಹಾಯವಾಣಿಯನ್ನು ಅಭಿವೃದ್ಧಿಪಡಿ ಸುವ ಕೆಲಸ ನಡೆಯುತ್ತಿದೆ. ಈ ಸೇವೆ ಯನ್ನು ಆರಂಭಿಸುವ ದಿನಾಂಕವನ್ನು ಇನ್ನೂ ನಿರ್ಧರಿಸಿಲ್ಲ. ಆದರೆ, ಮೊದಲು ಉತ್ತರ ಭಾರತದಲ್ಲಿ ಇದನ್ನು ಆರಂಭಿಸಿ, ನಂತರದ ದಿನಗಳಲ್ಲಿ ದೇಶದ ಇತರ ಭಾಗಗಳಿಗೂ ವಿಸ್ತರಿಸಲಾಗುವುದು’ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಮಾಧ್ಯಮ ಪ್ರತಿನಿಧಿಗಳಿಗೆ ಭಾನುವಾರ ತಿಳಿಸಿದ್ದಾರೆ.

ಮಾನಸಿಕ ಕಿರುಕುಳ ಹಾಗೂ ಭಾವನಾತ್ಮಕ ನಿಂದನೆಗಳಿಗೆ ಸಂಬಂಧಿಸಿದಂತೆ ಕಳೆದ ಏಪ್ರಿಲ್‌ ತಿಂಗ ಳಿಂದ ಈವರೆಗೆ 2,320 ದೂರುಗಳು ಬಂದಿವೆ. 2019ರ ಡಿಸೆಂಬರ್‌ನಿಂದ 2020ರ ಮಾರ್ಚ್‌ವರೆಗಿನ ಅವಧಿಯಲ್ಲಿ ಇಂಥ 1,550 ದೂರುಗಳು ಮಾತ್ರ ಬಂದಿದ್ದವು ಎಂದು ಮಹಿಳಾ ಆಯೋಗದ ಅಂಕಿ ಅಂಶಗಳು ಹೇಳಿವೆ.

ADVERTISEMENT

‘ಲಾಕ್‌ಡೌನ್‌ ಅವಧಿಯಲ್ಲಿ ಮಹಿಳೆಯರಷ್ಟೇ ಅಲ್ಲ ಪುರುಷರು ಸಹ ಮಾನಸಿಕ ಆರೋಗ್ಯದ ಸಮಸ್ಯೆ ಅನುಭವಿಸಿದ್ದಾರೆ. ಮಹಿಳೆಯರು ಮನೆಯಿಂದ ಕಚೇರಿಯ ಕೆಲಸ ಮಾಡುತ್ತಲೇ ಮನೆಯ ಇತರ ಕೆಲಸಗಳನ್ನೂ ಮಾಡಿದ್ದಾರೆ. ಇಂಥ ಸಂದರ್ಭದಲ್ಲಿ ಮಾನಸಿಕ ಹಿಂಸೆ ಅನುಭವಿಸಿದ್ದರೂ ಪಾಲಕರನ್ನು ಸಂಪರ್ಕಿಸಲೂ ಅವರಿಂದ ಸಾಧ್ಯವಾಗಿಲ್ಲ. ಬೇರೆ ಸಂದರ್ಭದಲ್ಲಾದರೆ ಪಾಲಕರು ಅಥವಾ ಸ್ನೇಹಿತರನ್ನು ಭೇಟಿಯಾಗಲು ಅವರಿಗೆ ಅವಕಾಶ ಲಭಿಸುತ್ತಿತ್ತು. ಲಾಕ್‌ಡೌನ್‌ ಅವಧಿಯಲ್ಲಿ ಎಲ್ಲರೂ ಮನೆಯೊಳಗೆ ಬಂದಿಯಾದರು. ಇದರಿಂದಾಗಿ ಮಾನಸಿಕ ಉದ್ವೇಗ ಹೆಚ್ಚಾಗಿದೆ’ ಎಂದು ಶರ್ಮಾ ಹೇಳಿದ್ದಾರೆ.

‘ಠಾಣೆಗೆ ಹೋಗಿ ದೂರು ನೀಡಲು ಮಹಿಳೆಯರಿಗೆ ಸಾಧ್ಯವಾಗದು ಎಂಬುದು ನಮಗೆ ಗೊತ್ತಿದೆ. ಅನೇಕ ಮಹಿಳೆಯರಿಗೆ ಇ–ಮೇಲ್‌ ಕಳುಹಿಸುವುದೂ ಗೊತ್ತಿಲ್ಲ. ಅದಕ್ಕಾಗಿ ವಾಟ್ಸ್‌ ಆ್ಯಪ್‌ ಸಂಖ್ಯೆಯನ್ನು ನೀಡಿದ್ದೆವು. ಇದಾದ ನಂತರ ಬರುವ ದೂರುಗಳ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರ ಮೇಲೆ ನಡೆಯುವ ಒಟ್ಟಾರೆ ದೌರ್ಜನ್ಯಗಳ ಸಂಖ್ಯೆಯೂ ಕಳೆದ ಎರಡು ತಿಂಗಳಲ್ಲಿ ಹೆಚ್ಚಾಗಿದೆ’ ಎಂದು ಶರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.